ಈರೇಳುಭುವನವನು ಒಡಲೊಳಗೆ ಇಂಬಿಟ್ಟುಕೊಂಡು
ಲಿಂಗರೂಪಾಗಿ ಭಕ್ತನ ಕರಸ್ಥಲಕ್ಕೆ ಬಂದು
ಪೂಜೆಗೊಂಡಿತ್ತು ನೋಡಾ!
ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು,
ಭಕ್ತನು ತಾನು ಹಿಂದೆ ನಡೆದ
ಜೂಜು ಬೇಂಟೆ ಚದುರಂಗ
ಲೆತ್ತ ಪಗಡೆಯಾಟಂಗಳಂ
ಪರಿಹಾಸಕರ ಕೂಡಿಕೊಂಡು ಕೆಲೆದಾಡುವದಂ ಬಿಟ್ಟು,
ಬಂಧುವ ತೊರೆದು ಮುಂದೆ ಶಿವಪಥದಲ್ಲಿ
ನಡೆಯಬಲ್ಲಾತನೇ ಸದ್ಭಕ್ತನಲ್ಲದೆ,
ಹಣದಾಸೆಗೆ ಹಂಗಿಗನಾಗಿ,
ಗುಣದಾಸೆಗೆ ಅಮೇಧ್ಯವ ತಿಂದು,
ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ? ಉಂಟೇ? ಎಂಬ
ಪಂಚಮಹಾಪಾತಕರ ಮುಖವ ನೋಡಲಾಗದು.
ಅವರ ಮಾತ ಕೇಳಲಾಗದು, ಅದೆಂತೆಂದಡೆ:
ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ?
ಬೆಕ್ಕು ಭಕ್ತನಾದರೆ
ಇಲಿಯ ತಿಂಬುದು ಮಾಂಬುದೆ?
ಹಂದಿ ಭಕ್ತನಾದರೆ
ಹಡಿಕೆಯ ತಿಂಬುದು ಮಾಂಬುದೆ?
ಶುನಕ ಭಕ್ತನಾದರೆ
ಮೂಳೆ ಮಾಂಸವ ತಿಂಬುದ ಮಾಂಬುದೆ?
ಕೋಳಿಯ ತಂದು ಪಂಜರವ ಕೂಡಿ
ಅಮೃತಾನ್ನವನಿಕ್ಕಿ ಸಲಹಿದರೆ
ಅದು ತಾನೆ ಮತ್ತೆ ತಿಂಬ ಹಡುವಿಂಗೆ
ಚಿತ್ತವನಿಕ್ಕುದುಂ ಮಾಂಬುದೆ?
ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು.
ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ
ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ
ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ
ಇಂತಿವ ಬಿಡದಿರ್ದವರುಗಳು
ಆ ಕತ್ತೆ ಬೆಕ್ಕು ಸೂಕರ ಸೊಣಗ
ಕೋಳಿಗಿಂದತ್ತತ್ತ ಕಡೆ ನೋಡಿರೇ.
ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ
ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ
ನಡುನೀರಿಗೆ ಹೋದ ಹರಿಗೋಲು
ತಲೆ ಕೆಳಗಾದಂತೆ ಕಾಣಾ ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Īrēḷubhuvanavanu oḍaloḷage imbiṭṭukoṇḍu
liṅgarūpāgi bhaktana karasthalakke bandu
pūjegoṇḍittu nōḍā!
Antaha agamya agōcara liṅgavendaridu,
bhaktanu tānu hinde naḍeda
jūju bēṇṭe caduraṅga
letta pagaḍeyāṭaṅgaḷaṁ
parihāsakara kūḍikoṇḍu keledāḍuvadaṁ biṭṭu,
bandhuva toredu munde śivapathadalli
naḍeyaballātanē sadbhaktanallade,
haṇadāsege haṅgiganāgi,
guṇadāsege amēdhyava tindu,
bandhugaḷa biṭṭu bhaktiyillavē? Uṇṭē? Emba
pan̄camahāpātakara mukhava nōḍalāgadu.
Avara māta kēḷalāgadu, adentendaḍe:
Katte bhaktanādare kisukuḷava timbuda māmbude?
Bekku bhaktanādare
iliya timbudu māmbude?
Handi bhaktanādare
haḍikeya timbudu māmbude?
Śunaka bhaktanādare
mūḷe mānsava timbuda māmbude?
Kōḷiya tandu pan̄jarava kūḍi
amr̥tānnavanikki salahidare
adu tāne matte timba haḍuviṅge
cittavanikkuduṁ māmbude?
Intī bhavitanakke hēsi bhaktanāda baḷika
Anācārava biṭṭu sadācāradalli naḍeyabēku.
Guruvādaḍū āgali bhaktanādaḍū āgali
tānu hinde bhaviyāgiddāga bhun̄jisuttidda
sure mānsa bhaṅgi bhavisaṅga bhavipāka
intiva biḍadirdavarugaḷu
ā katte bekku sūkara soṇaga
kōḷigindattatta kaḍe nōḍirē.
Cinnada beṭṭavanēridavanu kaṇṇukāṇadippante
gaṇeyanērida ḍomba mai maredippante
naḍunīrige hōda harigōlu
tale keḷagādante kāṇā kūḍalacennasaṅgamadēvā.