Index   ವಚನ - 1050    Search  
 
ಉದಯ ಮಧ್ಯಾಹ್ನ ಅಸ್ತಮಾನವೆಂಬ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬರು. ಉದಯವಾವುದು? ಮಧ್ಯಾಹ್ನವಾವುದು? ಅಸ್ತಮಾನವಾವುದು? ಬಲ್ಲವರು ನೀವು ಹೇಳಿರೆ. ಕಾಯದ ಉದಯವೊ? ಕಾಯದ ಮಧ್ಯಾಹ್ನವೊ? ಕಾಯದ ಅಸ್ತಮಾನವೊ ? ಕಾಯದ ಉದಯ ಬಲ್ಲಾತ ಕರ್ಮಿ, ಕಾಯದ ಮಧ್ಯಾಹ್ನವ ಬಲ್ಲತ ಪ್ರಪಂಚಿ, ಕಾಯದ ಅಸ್ತಮಾನವ ಬಲ್ಲಾತ ವಿರಕ್ತ. ಜೀವದ ಉದಯವೊ? ಜೀವದ ಮಧ್ಯಾಹ್ನವೊ? ಜೀವದ ಅಸ್ತಮಾನವೊ? ಜೀವದ ಉದಯವ ಬಲ್ಲಾತ ಜ್ಞಾನಿ, ಜೀವದ ಮಧ್ಯಾಹ್ನವ ಬಲ್ಲಾತ ಜಾತಿಸ್ಮರ, ಜೀವದ ಅಸ್ತಮಾನ ಬಲ್ಲಾತ ಜೀವನ್ಮುಕ್ತ ಲಿಂಗದ ಉದಯ, ಲಿಂಗದ ಮಧ್ಯಾಹ್ನ, ಲಿಂಗದ ಅಸ್ತಮಾನ- ಇಂತೀ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬಲ್ಲಡೆ ಕೂಡಲಚೆನ್ನಸಂಗಮದೇವರಲ್ಲಿ ಆತನು ಅನವರತ ಲಿಂಗಾರ್ಚನಾಪರನು.