Index   ವಚನ - 1052    Search  
 
ಉದಾಸೀನವ ಮಾಡದ ಭಕ್ತರ ಮಂದಿರದಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮದ ಪರಿಯಾಯವೆಂತೆಂದಡೆ; ಆ ಭಕ್ತನ ಗೃಹದಲ್ಲಿ ಕರ್ತನಾಗಿ ನಿಂದು ಭಾಂಡಭಾಜನಂಗಳ ಮುಟ್ಟಿ ಸೇವೆಯ ಮಾಡುವ ಆ ಭಕ್ತನ ಸತಿಸುತಮಾತೆ ಸಹೋದರ ಬಂಧುಜನ ಭೃತ್ಯ ದಾಸಿಯರು ಮೊದಲಾದ ಸರ್ವರೂ ಲಿಂಗಾರ್ಚಕ ಶ್ರೇಷ್ಠರು, ಪಾದೋದಕ ಪ್ರಸಾದ ವಿಶ್ವಾಸ ಭಕ್ತಿಯುಕ್ತರೆಂಬುದನರಿದು ಅಂದಂದಿಂಗವರ ಹೊಂದಿ ಮುಂದುಗೊಂಡಿರ್ಪ ತಾಮಸಗಳನ್ನು ಹಿಂದುಗಳೆವುತ್ತ ಸತ್ಯ ಭಕ್ತಿಯನು ಬಂದ ಪದಾರ್ಥವನು ಪ್ರಸಾದವೆಂದೇ ಕಂಡು ಕೈಕೊಂಡು, ಲಿಂಗಾರ್ಪಿತ ಘನಪ್ರಸಾದಭೋಗಿಯಾಗಿ ತನ್ನ ಒಕ್ಕುದ ಮಿಕ್ಕುದನಾ ಭಕ್ತಜನಕಿಕ್ಕಿ ತನ್ನಲ್ಲಿ ಒಡಗೂಡಿಕೊಂಡು ಸಲುಹಬಲ್ಲ ಜಂಗಮವೇ ಜಗ‌ತ್‌ಪಾವನ. ಇನಿತಲ್ಲದೆ ಅವರು ನಡೆದಂತೆ ನಡೆಯಿಲಿ, ಅವರು ಕೊಂಡ ಕಾರಣ ನಮಗೇಕೆಂದು ಆ ಭಕ್ತಜನಂಗಳಲ್ಲಿ ಹೊದ್ದಿರ್ದ ತಾಮಸಂಗಳನು ಪರಿಹರಿಸದೆ ತನ್ನ ಒಡಲುಕಕ್ಕುಲತೆಗೆ ಉಪಾಧಿಯ ನುಡಿದು ತಮ್ಮ ಒಡಲ ಹೊರೆವ ದರುಶನಜಂಗುಳಿಗಳೆಲ್ಲರೂ ಜಂಗಮಸ್ಥಲಕ್ಕೆ ಸಲ್ಲರು. ಅದೆಂತೆಂದೊಡೆ: "ತಾಮಸಂ ಭಕ್ತಗೇಹಾನಾಂ ಶ್ವಾನಮಾಂಸಸಮಂ ಭವೇತ್| ಇತಿ ಸಂಕಲ್ಪ್ಯ ಭುಂಜಂತಿ ತೇ ಜಂಗಮಾ ಬಹಿರ್ನರಾಃ|| ಶ್ವಾಪಿಂಡಂ ಕುರುತೇ ಯೇನ ಲಾಂಗೂಲೇ ಚಾಲನಂ ಯಥಾ.| ಉಪಾಧಿಜಂಗಮಂ ಯಸ್ಯ ತಸ್ಯ ಜೀವೇಶ್ಚ ಗಚ್ಛಯೇತ್"|| ಇಂತೆಂದುದಾಗಿ ಇದು ಕಾರಣ ತಾಮಸವಿಡಿದು ಮಾಡುವಾತ ಭಕ್ತನಲ್ಲ. ಆ ತಾಮಸ ಮುಖದಿಂದ ಮಾಯೋಚ್ಛಿಷ್ಟವ ಕೊಂಡಾತ ಜಂಗಮವಲ್ಲ ಅವರೀರ್ವರನ್ನು ಕೂಡಲಚೆನ್ನಸಂಗಯ್ಯ ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ.