ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ
ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ,
ಹದಿನಾರು ಲಕ್ಷದ ಮೇಲೆ ಐನೂರು
ದೇವರು ಕೂಡಿಕೊಂಡು
ಒಬ್ಬ ಜಂಗಮಕ್ಕೆ ಮಾಡಿದ
ಬೋನವನಾರೋಗಿಸಲರಿಯವು.
ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ.
ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು?
ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ
ನಿನ್ನ ತಾಯಿ-ತಂದೆ ಯಾರು?
ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ
ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು.
ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ?
ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ?
ಇನ್ನೇಕೆ ದೇವತನಕ್ಕೆ ಬೆರತಹೆ?
"ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ|
ಜಂಗಮಸ್ಯಾದಮಾನೇನ ಸ್ಥಾವರಂ ನಿಷ್ಫಲಂ ಭವೇತ್"||
ಇದು ಕಾರಣ
ಕೂಡಲಚೆನ್ನಸಂಗಯ್ಯಾ,
ತಪ್ಪದೆ ನಾಲ್ಕುಯುಗದಲ್ಲಿ
ಜಂಗಮವೆ ಪ್ರಾಣಲಿಂಗವಾದ ಕಾರಣ
ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.