ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು,
ನಿನ್ನ ಕಾಯದೊಳಗೆ ಎನ್ನ ಕಾಯವಿಪ್ಪುದು.
ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು,
ನಿನ್ನ ಜೀವದೊಳಗೆ ಎನ್ನ ಜೀವವಿಪ್ಪುದು,
ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವಿಪ್ಪುದು,
ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವಿಪ್ಪುದು.
ಎನ್ನ ಇಂದ್ರಿಯಂಗಳೊಳಗೆ ನಿನ್ನ ಇಂದ್ರಿಯಂಗಳಿಪ್ಪುವು,
ನಿನ್ನ ಇಂದ್ರಿಯಂಗಳೊಳಗೆ ಎನ್ನ ಇಂದ್ರಿಯಂಗಳಿಪ್ಪುವು.
ಎನ್ನ ವಿಷಯಂಗಳೊಳಗೆ ನಿನ್ನ ವಿಷಯಂಗಳಿಪ್ಪುವು.
ನಿನ್ನ ವಿಷಯಂಗಳೊಳಗೆ ಎನ್ನ ವಿಷಯಂಗಳಿಪ್ಪುವು.
ಎನ್ನ ಕರಣಂಗಳೊಳಗೆ ನಿನ್ನ ಕರಣಂಗಳಿಪ್ಪುವು.
ನಿನ್ನ ಕರಣಂಗಳೊಳಗೆ ಎನ್ನ ಕರಣಂಗಳಿಪ್ಪುವು.
ಇಂತು ನಾನೆ ರೂಪು, ನೀನೆ ನಿರೂಪು.
ರೂಪಿಂಗೆ ಕೇಡುಂಟು, ನಿರೂಪಿಂಗೆ ಕೇಡಿಲ್ಲ,
ಆನು ಕರ್ಪೂರ, ನೀನು ಜ್ಯೋತಿ.
ಆನು ನಿಮ್ಮೊಳಡಗಿದೆನು ಕೂಡಲಚೆನ್ನಸಂಗಮದೇವಾ.