ಎನ್ನ ಸರ್ವಾಂಗವೆಲ್ಲವೂ ಲಿಂಗವಾದ
ಪರಿಕ್ರಮವೆಂತೆಂದಡೆ:
ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ
ಸರ್ವಾಂಗದಲ್ಲಿಭಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು.
ಅದೆಂತೆಂದಡೆ:
ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು,
ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು
ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು.
ಇಂತು ಅಂಗವ ಕುರಿತು ಮೂರು ತೆರನಾಯಿತ್ತು.
ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು.
ಅದು ಹೇಗೆಂದಡೆ:
ಹೃದಯದಲ್ಲಿ ಮಹಾಲಿಂಗವೆಂದು,
ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು,
ತ್ವಕ್ಕಿನಲ್ಲಿ ಜಂಗಮಲಿಂಗವೆಂದು,
ನೇತ್ರದಲ್ಲಿ ಶಿವಲಿಂಗವೆಂದು,
ಜಿಹ್ವೆಯಲ್ಲಿ ಗುರುಲಿಂಗವೆಂದು,
ಘ್ರಾಣದಲ್ಲಿ ಆಚಾರಲಿಂಗವೆಂದು,
ಇಂತು ಷಡಿಂದ್ರಿಯಂಗಳಲ್ಲಿ
ಷಡ್ವಿಧಲಿಂಗವಾಗಿ ತೋರಿತ್ತು.
ಇಂತೀ ಮರ್ಯಾದೆಯಲ್ಲಿ
ಜ್ಞಾನ-ಕರ್ಮೇಂದ್ರಿಯಂಗಳಲ್ಲಿಯೂ
ಲಿಂಗವೆ ಪ್ರಕಾಶಿಸುತ್ತಿಹುದು.
ಅದು ಹೇಗೆಂದಡೆ:
ಜ್ಞಾನೇಂದ್ರಿಯಂಗಳಿಗೆಯೂ
ಕರ್ಮೇಂದ್ರಿಯಂಗಳಿಗೆಯೂ ಭೇದವಿಲ್ಲ.
ಅದೆಂತೆಂದಡೆ:
ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ,
ಶಬ್ದಕ್ಕೂ ವಚನಕ್ಕೂ ಭೇದವಿಲ್ಲ;
ತ್ವಕ್ಕಿಗೂ ಪಾಣಿಗೂ ಭೇದವಿಲ್ಲ,
ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ;
ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ,
ರೂಪಿಗೂ ಗಮನಕ್ಕೂ ಭೇದವಿಲ್ಲ,
ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ,
ರಸಕ್ಕೂ ಆನಂದಕ್ಕೂ ಭೇದವಿಲ್ಲ;
ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ,
ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ,
ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ
ವಾಕ್ಕೆಂಬ ಕರ್ಮೇಂದ್ರಿಯಕ್ಕೂ
ಶಬ್ದ ವಿಷಯ, ಮೂಲಭೂತ ಆಕಾಶ,
ಈಶಾನಮೂರ್ತಿ ಅಧಿದೇವತೆ.
ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ
ಪಾಣಿಯೆಂಬ ಕರ್ಮೇಂದ್ರಿಯಕ್ಕೂ
ಸ್ಪರ್ಶನ ವಿಷಯ, ಮೂಲಭೂತ ವಾಯು,
ತತ್ಪುರುಷಮೂರ್ತಿ ಅಧಿದೇವತೆ.
ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ
ಪಾದವೆಂಬ ಕರ್ಮೇಂದ್ರಿಯಕ್ಕೂ
ರೂಪು ವಿಷಯ, ಮೂಲಭೂತ ಅಗ್ನಿ,
ಅಘೋರಮೂರ್ತಿ ಅಧಿದೇವತೆ.
ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ
ಗುಹ್ಯವೆಂಬ ಕರ್ಮೇಂದ್ರಿಯಕ್ಕೂ
ರಸ ವಿಷಯ, ಮೂಲಭೂತ ಅಪ್ಪು,
ವಾಮದೇವಮೂರ್ತಿ ಅಧಿದೇವತೆ,
ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ
ಪಾಯುವೆಂಬ ಕರ್ಮೇಂದ್ರಿಯಕ್ಕೂ
ಗಂಧ ವಿಷಯ, ಮೂಲಭೂತ ಪೃಥ್ವಿ,
ಸದ್ಯೋಜಾತಮೂರ್ತಿ ಅಧಿದೇವತೆ.
ಇಂತೀ ಜ್ಞಾನೇಂದ್ರಿಯಂಗಳಿಗೆಯೂ
ಕರ್ಮೇಂದ್ರಿಯಂಗಳಿಗೆಯೂ
ಹೃದಯವೆ ಆಶ್ರಯಸ್ಥಾನವಾದ ಕಾರಣ,
ಹೃದಯ ಆಕಾಶವೆನಿಸಿತ್ತು.
ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ
ಇಂದ್ರಿಯಂಗಳಿರುತ್ತಿಹವು.
ಗುರೂಪದೇಶದಿಂದ ಎಲ್ಲಾ
ಇಂದ್ರಿಯಂಗಳಲ್ಲಿಯೂ
ಲಿಂಗವೆ ಪ್ರಕಾಶಿಸುತ್ತಿಹುದು.
ಅದು ಹೇಗೆಂದಡೆ:
ಘ್ರಾಣದ ಘ್ರಾಣವೆ ಆಚಾರಲಿಂಗ;
ಜಿಹ್ವೆಯ ಜಿಹ್ವೆಯೆ ಗುರುಲಿಂಗ,
ನೇತ್ರದ ನೇತ್ರವೆ ಶಿವಲಿಂಗ,
ತ್ವಕ್ಕಿನ ತ್ವಕ್ಕೆ ಜಂಗಮಲಿಂಗ,
ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ,
ಹೃದಯದ ಹೃದಯವೆ ಮಹಾಲಿಂಗ.
ಈ ಆರು ಲಿಂಗಕ್ಕೆ ಅಂಗಸ್ಥಲ ಆರು;
ಅವಾವುವೆಂದಡೆ; ಐಕ್ಯ ಶರಣ ಪ್ರಾಣಲಿಂಗಿ
ಪ್ರಸಾದಿ ಮಹೇಶ್ವರ ಭಕ್ತ
ಎಂದೀ ಆರು ಅಂಗಸ್ಥಲಗಳು.
ಇವಕ್ಕೆ ವಿವರ:
ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ
ಇಂದ್ರಿಯಂಗಳ ಪರಿಣಾಮವನು
ಸಮರಸಭಕ್ತಿಯಿಂದ
ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ.
ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ
ಸುಶಬ್ದದ್ರವ್ಯವನು ಆನಂದಭಕ್ತಿಯಿಂದ
ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ.
ಅನಿಲಾಂಗದಲ್ಲಿ ಮನೋಹಸ್ತದಿಂದ
ಸುಸ್ಪರ್ಶನದ್ರವ್ಯವನು ಅನುಭಾವಭಕ್ತಿಯಿಂದ
ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ.
ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ
ಸುರೂಪುದ್ರವ್ಯವನು
ಅವಧಾನಭಕ್ತಿಯಿಂದ
ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ,
ಜಲಾಂಗದಲ್ಲಿ ಸುಬುದ್ಧಿ
ಹಸ್ತದಿಂದ ಸುರಸದ್ರವ್ಯವನು
ನೈಷ್ಠಿಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ
ಮಾಹೇಶ್ವರ.
ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ
ಸುಗಂಧದ್ರವ್ಯವನು
ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ.
ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ
ಷಡ್ಲಿಂಗ ಸ್ಥಾಪ್ಯವಾಗಿಹವು.
ಅದು ಹೇಗೆಂದಡೆ,
ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ,
ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ,
ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ,
ಎಂದು ಆರು ತೆರನಾಗಿಹವು. ಅದೆಂತೆಂದಡೆ:
ಆಧಾರದಲ್ಲಿ ನಕಾರ, ಸ್ವಾಧಿಷ್ಠಾನದಲ್ಲಿ ಮಕಾರ,
ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ,
ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ,
ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ
ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು.
ಅದು ಹೇಗೆಂದಡೆ:
ತ್ವಙ್ಮಯವಾಗಿಹುದು ಓಂಕಾರ,
ರುಧಿರಮಯವಾಗಿಹುದು ನಕಾರ,
ಮಾಂಸಮಯವಾಗಿಹುದು ಮಕಾರ,
ಮೇಧೋಮಯವಾಗಿಹುದು ಶಿಕಾರ,
ಅಸ್ಥಿಮಯವಾಗಿಹುದು ವಾಕಾರ,
ಮಜ್ಜಾಮಯವಾಗಿಹುದು ಯಕಾರ.
ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ,
ಅವೆ ಲಿಂಗಂಗಳಾಗಿ,
ಒಳಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ
ಲಿಂಗಮಯವಾದ ಇರವು.
ಅದು ತಾನೆ ಶಿವನಿರವು,
ಅದು ತಾನೆ ಶಿವನ ಭವನ.
ಅದು ತಾನೆ ಶಿವನ ವಿಶ್ರಾಮಸ್ಥಾನ.
ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ,
ಆತನೆ ಲಿಂಗೈಕ್ಯ.
ಇಂತೀ ಷಟ್ಸ್ಥಲಬ್ರಹ್ಮವೆಂಬುದು
ಅಪ್ರಮಾಣ ಅಗೋಚರ
ಅನಿರ್ವಾಚ್ಯವಾದ ಕಾರಣ,
ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು.
ಉಪ್ಪು ನೀರೊಳು ಕೂಡಿದಂತೆ,
ವಾರಿಕಲ್ಲು ಅಂಬುಧಿಯೊಳು ಬಿದ್ದಂತೆ,
ಶಿಖಿಕರ್ಪೂರ ಯೋಗದಂತೆ
ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ,
ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.
Art
Manuscript
Music
Courtesy:
Transliteration
Enna sarvāṅgavellavū liṅgavāda
parikramaventendaḍe:
Śrīguru basavaṇṇanupadēśisida iṣṭaliṅgavenna
sarvāṅgadallibhinna nāmaṅgaḷinda prakāśisuttihudu.
Adentendaḍe:
Sthūlāṅgadalli iṣṭaliṅgavendu,
sūkṣmāṅgadalli prāṇaliṅgavendu
kāraṇāṅgadalli bhāvaliṅgavendu tribhēdavāgihudu.
Intu aṅgava kuritu mūru teranāyittu.
Innu indriyaṅgaḷa kuritu āru teranāgirpudu.
Adu hēgendaḍe:
Hr̥dayadalli mahāliṅgavendu,
śrōtradalli prasādaliṅgavendu,
Tvakkinalli jaṅgamaliṅgavendu,
nētradalli śivaliṅgavendu,
jihveyalli guruliṅgavendu,
ghrāṇadalli ācāraliṅgavendu,
intu ṣaḍindriyaṅgaḷalli
ṣaḍvidhaliṅgavāgi tōrittu.
Intī maryādeyalli
jñāna-karmēndriyaṅgaḷalliyū
liṅgave prakāśisuttihudu.
Adu hēgendaḍe:
Jñānēndriyaṅgaḷigeyū
karmēndriyaṅgaḷigeyū bhēdavilla.
Adentendaḍe:
Śrōtrakkū vākkigū bhēdavilla,
śabdakkū vacanakkū bhēdavilla;
Tvakkigū pāṇigū bhēdavilla,
sparśakkū ādānakkū bhēdavilla;
nētrakkū pādakkū bhēdavilla,
rūpigū gamanakkū bhēdavilla,
jihvegū guhyakkū bhēdavilla,
rasakkū ānandakkū bhēdavilla;
ghrāṇakkū gudakkū bhēdavilla,
gandhakkū visarjanakkū bhēdavilla,
innu śrōtravemba jñānēndriyakkū
vākkemba karmēndriyakkū
śabda viṣaya, mūlabhūta ākāśa,
īśānamūrti adhidēvate.
Tvakkemba jñānēndriyakkū
pāṇiyemba karmēndriyakkū
sparśana viṣaya, mūlabhūta vāyu,
tatpuruṣamūrti adhidēvate.
Dr̥kkemba jñānēndriyakkū
Pādavemba karmēndriyakkū
rūpu viṣaya, mūlabhūta agni,
aghōramūrti adhidēvate.
Jihveyemba jñānēndriyakkū
guhyavemba karmēndriyakkū
rasa viṣaya, mūlabhūta appu,
vāmadēvamūrti adhidēvate,
ghrāṇavemba jñānēndriyakkū
pāyuvemba karmēndriyakkū
gandha viṣaya, mūlabhūta pr̥thvi,
sadyōjātamūrti adhidēvate.
Intī jñānēndriyaṅgaḷigeyū
karmēndriyaṅgaḷigeyū
Hr̥dayave āśrayasthānavāda kāraṇa,
hr̥daya ākāśavenisittu.
Alli sthūla sūkṣma kāraṇa rūpindellā
indriyaṅgaḷiruttihavu.
Gurūpadēśadinda ellā
indriyaṅgaḷalliyū
liṅgave prakāśisuttihudu.
Adu hēgendaḍe:
Ghrāṇada ghrāṇave ācāraliṅga;
jihveya jihveye guruliṅga,
nētrada nētrave śivaliṅga,
tvakkina tvakke jaṅgamaliṅga,
śrōtrada śrōtrave prasādaliṅga,
hr̥dayada hr̥dayave mahāliṅga.
Ī āru liṅgakke aṅgasthala āru;
avāvuvendaḍe; aikya śaraṇa prāṇaliṅgi
prasādi mahēśvara bhakta
endī āru aṅgasthalagaḷu.
Ivakke vivara:
Ātmāṅgadalli sadbhāva hastadinda ellā
indriyaṅgaḷa pariṇāmavanu
samarasabhaktiyinda
mahāliṅgakkarpisuvātane aikya.
Vyōmāṅgadalli sujñānahastadinda
suśabdadravyavanu ānandabhaktiyinda
prasādaliṅgakkarpisuvātane śaraṇa.
Anilāṅgadalli manōhastadinda
susparśanadravyavanu anubhāvabhaktiyinda
śivaliṅgakkarpisuvātane prāṇaliṅgi.
Analāṅgadalli nirahaṅkārahastadinda
surūpudravyavanu
avadhānabhaktiyinda
śivaliṅgakkarpisuvātane prasādi,
jalāṅgadalli subud'dhi
Hastadinda surasadravyavanu
naiṣṭhikābhaktiyinda guruliṅgakkarpisuvātane
māhēśvara.
Bhūmyaṅgadalli sucittahastadinda
sugandhadravyavanu
sadbhaktiyinda ācāraliṅgakkarpisuvātane bhakta.
Innu ṣaḍādhāraṅgaḷalli ṣaḍakṣararūpadinda
ṣaḍliṅga sthāpyavāgihavu.
Adu hēgendaḍe,
nakārave ācāraliṅga, makārave guruliṅga,
śikārave śivaliṅga, vākārave jaṅgamaliṅga,
yākārave prasādaliṅga, ōṅkārave mahāliṅga,
endu āru teranāgihavu. Adentendaḍe:
Ādhāradalli nakāra, svādhiṣṭhānadalli makāra,
maṇipūrakadalli śikāra, anāhatadalli vākāra,
viśud'dhiyalli yakāra, ājñeyalli ōṅkāra,
intī maryādeyalli ṣaḍdhātuvinalli
ṣaḍakṣararūpinda ṣaḍliṅga sthāpyavāgihavu.
Adu hēgendaḍe:
Tvaṅmayavāgihudu ōṅkāra,
rudhiramayavāgihudu nakāra,
mānsamayavāgihudu makāra,
mēdhōmayavāgihudu śikāra,
asthimayavāgihudu vākāra,
majjāmayavāgihudu yakāra.
Intī ṣaḍdhātuve ṣaḍakṣaramayavāgi,
ave liṅgaṅgaḷāgi,
oḷahorage terahillade sarvāṅgavellavū
liṅgamayavāda iravu.
Adu tāne śivaniravu,
Adu tāne śivana bhavana.
Adu tāne śivana viśrāmasthāna.
Intī ṣaṭsthalabrahmavanaridātane śaraṇa,
ātane liṅgaikya.
Intī ṣaṭsthalabrahmavembudu
apramāṇa agōcara
anirvācyavāda kāraṇa,
vacisutta vacisutta vacisutta vacanageṭṭittu.
Uppu nīroḷu kūḍidante,
vārikallu ambudhiyoḷu biddante,
śikhikarpūra yōgadante
ādenayyā kūḍalacennasaṅgayyanalli,
basavaṇṇana bhāvahasta muṭṭida kāraṇa.