ಗುರುಲಿಂಗಮೋಹಿತನಾದಡೆ
ಮಾತಾಪಿತರ ಮೋಹವ ಮರೆಯಬೇಕು.
ಗುರುಲಿಂಗಭಕ್ತನಾದಡೆ
ಪೂರ್ವಬಂಧುಪ್ರೇಮವ ಮಾಡಲಾಗದು.
ಗುರುಲಿಂಗಪೂಜಕನಾದಡೆ
ಅನ್ಯಪೂಜೆಯ ಮಾಡಲಾಗದು.
ಗುರುಲಿಂಗವೀರನಾದಡೆ
ಗುರುಲಿಂಗಾಚಾರದಲ್ಲಿ ನಡೆಯಬೇಕು.
ಗುರುಲಿಂಗಪ್ರಸಾದಿಯಾದಡೆ
ಗುರ್ವಾಜ್ಞೆಯ ಮೀರಲಾಗದು.
ಗುರುಲಿಂಗಪ್ರಾಣಿಯಾದಡೆ
ಮಾನವರ ಸೇವೆ ಮಾಡಲಾಗದು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಈ ಆರು ಸಹಿತ ಗುರುಲಿಂಗಭಕ್ತಿ.