ಗುರುಹಸ್ತದಲ್ಲಿ ಉತ್ಪತ್ಯವಾಗಿ,
ಜಂಗಮಾನುಭವ ಶರಣರ ಸಂಗದಲ್ಲಿ ಬೆಳೆದು,
ನಿಜಲಿಂಗದಲ್ಲಿ ಲೀಯವಾದ ಗುರುಚರ ಭಕ್ತರು
ತಮ್ಮ ಸ್ಥೂಲಕಾಯವೆಂಬ ನರಕಂಥೆಯ ಕಳೆದರೆ,
ಭಕ್ತ ಬಂಧುಗಳಾದ ಆಪ್ತ ಗಣಂಗಳು ಬಂದು
ಸಮಾಧಿಯಂ ತೆಗೆದು, ಆ ಕಾಯವೆಂಬ ಕಂಥೆಯ
ನಿಕ್ಷೇಪವಂ ಮಾಡುವುದೆ ಸದಾಚಾರ.
ಇಂತಲ್ಲದೆ ಮೃತವಾದನೆಂದು ಗೂಟವಂ ಬಲಿದು,
ಗುಂಟಿಕೆಯನಿಕ್ಕಿ, ಶೋಕಂಗೆಯ್ದು,
ಪ್ರೇತಸೂತಕ ಕರ್ಮವಿಡಿದು,
ತದ್ದಿನವಂ ಮಾಡುವದನಾಚಾರ, ಪಂಚಮಹಾಪಾತಕ.
ಅವಂಗೆ ಗುರು ಲಿಂಗ ಜಂಗಮ
ಪ್ರಸಾದವಿಲ್ಲ
ಅದೆಂತೆಂದೊಡೆ:
"ಯೋ ಗುರುಂ ಮೃತಭಾವೇನ ತದ್ದಿನಂ ಯಸ್ಯ ಶೋಚ್ಯತೇ|
ಗುರುಲಿಂಗಪ್ರಸಾದಂ ಚ ನಾಸ್ತಿ ನಾಸ್ತಿ ವರಾನನೇ"||
ಎಂದುದಾಗಿ,
ಪ್ರೇತಸೂತಕದ ಪಾತಕರಿಗೆ
ಅಘೋರನರಕ ತಪ್ಪದು.
ಇಂತಪ್ಪ ಅಘೋರನರಕಿಗಳ
ಮುಖವ ನೋಡಲಾಗದು
ಕಾಣಾ ಕೂಡಲಚೆನ್ನಸಂಗಯ್ಯ.
Art
Manuscript
Music
Courtesy:
Transliteration
Guruhastadalli utpatyavāgi,
jaṅgamānubhava śaraṇara saṅgadalli beḷedu,
nijaliṅgadalli līyavāda gurucara bhaktaru
tam'ma sthūlakāyavemba narakantheya kaḷedare,
bhakta bandhugaḷāda āpta gaṇaṅgaḷu bandu
samādhiyaṁ tegedu, ā kāyavemba kantheya
nikṣēpavaṁ māḍuvude sadācāra.
Intallade mr̥tavādanendu gūṭavaṁ balidu,
guṇṭikeyanikki, śōkaṅgeydu,
prētasūtaka karmaviḍidu,
taddinavaṁ māḍuvadanācāra, pan̄camahāpātaka.
Avaṅge guru liṅga jaṅgama
Prasādavilla
adentendoḍe:
Yō guruṁ mr̥tabhāvēna taddinaṁ yasya śōcyatē|
guruliṅgaprasādaṁ ca nāsti nāsti varānanē||
endudāgi,
prētasūtakada pātakarige
aghōranaraka tappadu.
Intappa aghōranarakigaḷa
mukhava nōḍalāgadu
kāṇā kūḍalacennasaṅgayya.