Index   ವಚನ - 1250    Search  
 
ಜಂಗಮವೆ ಲಿಂಗ, ಲಿಂಗವೆ ಜಂಗಮವೆಂದು ತೋರಿ ನಿಜಲಿಂಗೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ. ಪ್ರಸಾದವೆ ಕಾಯ, ಕಾಯವೆ ಪ್ರಸಾದವೆಂಬುದ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗುಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ. ನಿಜಲಿಂಗವ ಎನ್ನಂಗದಲ್ಲಿ ಸ್ಥಾಪಿಸಿ ಎನ್ನ ನಿನ್ನಂತೆ ಮಾಡಿ ನಿಜಲಿಂಗದೊಳು ನಿರವಯವಾದೆಯಲ್ಲಾ ಬಸವಣ್ಣಾ. ಎನ್ನ ಮನವ ಮಹದಲ್ಲಿ ಲಯಮಾಡಿ ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ. ನಿಮ್ಮ ಒಕ್ಕುಮಿಕ್ಕಪ್ರಸಾದವನಿಕ್ಕಿ ನಿರಂತರದಲ್ಲಿ ಆಗುಮಾಡಿ ನಾಗಾಯವ್ವೆಯನಿಂಬುಕೊಂಡೆಯಲ್ಲಾ, ಬಸವಣ್ಣಾ. ಎನ್ನ ಮನ ನಿಮ್ಮ ಪಾದದಲ್ಲಿ ಕರಗಿತ್ತಯ್ಯಾ, ಬಸವಣ್ಣಾ. ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾಗಿ ಹೋದೆಯಲ್ಲಾ ಸಂಗನಬಸವಣ್ಣಾ.