Index   ವಚನ - 1268    Search  
 
ತನ್ನ ಪ್ರೀತಿಯ ಪುತ್ರ ಮಿತ್ರಾದಿಗಳು ಪರದೇಶದೊಳಗಿಪ್ಪರೆಂಬ ಭಾವದಲ್ಲಿ ಅಡಗಿದ ಆನಂದಕ್ಕಿಂತ ಮನಮುಟ್ಟಿ ನೆನೆವುದರಿಂದಾದ ಆನಂದ ಮಿಗಿಲಾಗಿಪ್ಪುದು ನೋಡಾ! ಮನಮುಟ್ಟಿ ನೆನೆವುದರ ಸುಖಕ್ಕಿಂತ, ಅವರನಪ್ಪಿ ಆಲಂಗಿಸುವುದರಿಂದಾದ ಸುಖ ಅಧಿಕವಾಗಿ ತೋರ್ಪುದು ನೋಡಾ! ಒಮ್ಮೆ ಅಪ್ಪಿ ಆಲಂಗಿಸಿದ ಆನಂದಕ್ಕಿಂತ ಅವರೊಡನೆ ಸದಾ ಕೂಡಿಪ್ಪ ಹರ್ಷ ಹಿರಿದಾಗಿಪ್ಪುದು ನೋಡಾ! ಇಂತೀ ದೃಷ್ಟಾಂತದಂತೆ, ಪರಶಿವ ಲಿಂಗವ ಭಾವದಲ್ಲಿ ಭಾವಿಸುವುದಕ್ಕಿಂತ ಮನಮುಟ್ಟಿ ನೆನೆವುದು, ಮನಮುಟ್ಟಿ ನೆನೆವುದಕ್ಕಿಂತ ಕಣ್ಮುಚ್ಚಿ ಕಾಣುವುದು, ಕಣ್ಮುಚ್ಚಿ ಕಾಣುವುದಕ್ಕಿಂತ ಕರಮುಟ್ಟಿ ಪೂಜಿಸುವುದು, ಕರಮುಟ್ಟಿ ಪೂಜಿಸುವುದಕ್ಕಿಂತ ಸದಾ ಅಂಗದಲ್ಲಿ ಹಿಂಗದೆ ಧರಿಸುವ ಹರ್ಷವು, ಪರಮಾವಧಿಯಾಗಿಪ್ಪುದು ನೋಡಾ! ಇದು ಕಾರಣ, ಕೂಡಲಚೆನ್ನಸಂಗಯ್ಯನ ಶರಣರು ಭಾವದಿಂದ ಮನಕ್ಕೆ, ಮನದಿಂದ ನೇತ್ರಕ್ಕೆ, ನೇತ್ರದಿಂದ ಕರಕ್ಕೆ ಆ ಶಿವಲಿಂಗವ ಬಿಜಯಂಗೈಸಿಕೊಂಡು ಪೂಜಾದಿ ಸತ್ಕ್ರಿಯೆಗಳನಗಲದೆ ಅಲಸದೆ ಆಚರಿಸುತಿಪ್ಪರು.