Index   ವಚನ - 1293    Search  
 
ತಾನು ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಮರಳಿ, ಭವಿಯಾಗಿದ್ದ ತಾಯಿ ತಂದೆ ಒಡಹುಟ್ಟಿದವರ ಬಂಧುಬಳಗವೆಂದು ಬೆರಸಿದರೆ ಕೊಂಡ ಮಾರಿಂಗೆ ಹೋಹುದು ತಪ್ಪದು. ಹಸಿಯ ಮಣ್ಣಿನಲ್ಲಿ ಮಾಡಿದ ಮಡಕೆ, ಅಗ್ನಿಯ ಮುಖದಲ್ಲಿ ಶುದ್ಧವಾದ ಬಳಿಕ ಅದು ತನ್ನ ಪೂರ್ವಕುಲವ ಕೂಡದು ನೋಡಾ, ಅದೆಂತೆಂದಡೆ: "ಅಗ್ನಿದಗ್ಧಘಟಂ ಪ್ರಾಹುರ್ನ ಭೂಯೋ ಮೃತ್ತಿಕಾಯತೇ| ತಚ್ಛಿವಾಚಾರಸಂಗೇನ ನ ಪುನರ್ಮಾನುಷೋ ಭವೇತ್"|| ಎಂದುದಾಗಿ, ಭಕ್ತನಾಗಿ, ಭವಿಯ ನಂಟನೆಂದು ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡು ಉಂಡನಾದರೆ ಪಂಚಮಹಾಪಾತಕ. ಅವಂಗೆ ನಾಯಕನರಕ ತಪ್ಪದು ಕಾಣಾ, ಕೂಡಲಚೆನ್ನಸಂಗಯ್ಯಾ.