Index   ವಚನ - 1304    Search  
 
ತ್ರಿವಿಧನಿರ್ವಚಂಕನೆ ಭಕ್ತ, ತ್ರಿವಿಧವಿರಾಗಿಯೆ ಜಂಗಮ. ಭಾಷೆಗೆ ತಪ್ಪದಿರ್ದಡೆ ಮಾಹೇಶ್ವರ ಪ್ರಸಾದಿ, ವೇಷವ ತೋರದಿರ್ದಡೆ ಜಂಗಮ. ಇಂದ್ರಿಯ ವಿಕಾರವಳಿದಡೆ ಪ್ರಸಾದಿ, ಮನವಳಿದಡೆ ಜಂಗಮ. ಪ್ರಾಣಸಂಚಾರಗೆಟ್ಟಡೆ ಪ್ರಾಣಲಿಂಗಿ, ಜೀವಭಾವಗೆಟ್ಟಡೆ ಜಂಗಮ. ಅರಿವಿನ ಭ್ರಾಂತಳಿದರೆ ಶರಣ, ಬೋಧೆಗೆಟ್ಟಡೆ ಜಂಗಮ. ತಾನಿಲ್ಲದಿರ್ದಡೆ ಐಕ್ಯ, ಏನೂ ಇಲ್ಲದಿರ್ದಡೆ ಜಂಗಮ. ಇಂತೀ ಷಟ್‍ಸ್ಥಲದಲ್ಲಿ ನಿಜವನರಿದು ನೆಲೆಗೊಂಡಾತನೆ ಶ್ರೀಗುರು. ಇಂತಲ್ಲದೆ ನುಡಿಯಲ್ಲಿ ಅದ್ವೈತವನಾಡಿ ನಡೆಯಲ್ಲಿ ಅನಂಗವ ನಡೆವರ ಕಂಡಡೆ ಎನ್ನ ಮನ ನಾಚಿತ್ತು ಕೂಡಲಚೆನ್ನಸಂಗಮದೇವಾ.