Index   ವಚನ - 1340    Search  
 
ನಿತ್ಯ ನಿರವಯ ನಿರಂಜನ ಪರಂಜ್ಯೋತಿ ಮಹಾಘನ ಪರವಸ್ತು ಪರಮಲೀಲಾ ವಿನೋದದಿಂದ ಪರಾಶಕ್ತಿಸಂಯುಕ್ತವಾಗಿ ಪರಾಪರ ವಿನೋದದಿಂದ ಅಖಿಲ ಬ್ರಹ್ಮಾಂಡಾವರಣವಾಯಿತ್ತು. ಇದನರಿಯದೆ ಶೈವರು ಶಾಕ್ತೇಯರು ವೈಷ್ಣವರು ಗಾಣಪತ್ಯರು ಸೌರರು, ಕಾಪಾಲಿಕರು, ಒಂದೊಂದು ಪರಿಯಲ್ಲಿ ಲಕ್ಷಿಸಿ ಹೆಸರಿಟ್ಟು ನುಡಿವರು. ಇನ್ನು ಶೈವನ ಯುಕ್ತಿ ಎಂತೆಂದಡೆ: `ಶಿವಸಾಕ್ಷಿಕ, ಶಕ್ತಿ, ತಂತ್ರ, ಜೀವನೋಪಾಧಿ' ಎಂದು. ಇದು ಕ್ರಮವಲ್ಲ, ಮತ್ತೆ ಹೇಗೆಂದಡೆ: ಬೀಜವೃಕ್ಷದಂತೆ ಬ್ರಹ್ಮದ ಪರಿಯಾಯ. ಅದೆಂತೆಂದಡೆ: "ಪತ್ರಪುಷ್ಪ ಫಲೈರ್ಯುಕ್ತಃ ಸಶಾಖಃ ಪಾದಮೂಲವಾನ್| ಬೀಜೇ ವೃಕ್ಷೋ ಯಥಾ ಸರ್ವಂ ತಥಾ ಬ್ರಹ್ಮಣಿ ಸಂಸ್ಥಿತಮ್”|| ಎಂದುದಾಗಿ. ಇನ್ನು ಶಾಕ್ತೇಯನ ಯುಕ್ತಿ ಎಂತೆಂದಡೆ: ‘ನಾದಬಿಂದು ಸಂಯುಕ್ತ, ಮಂತ್ರರೂಪವಸ್ತು ಜಗತ್ತು ಕರ್ಮರೂಪ’. ಇದು ಕ್ರಮವಲ್ಲ; ಮತ್ತೆ ಹೇಗೆಂದಡೆ: ವಾರಿಧಿಯ ನೆರೆ ತೊರೆ ತರಂಗದಂತೆ ಬ್ರಹ್ಮದ ಪರಿಯಾಯ; ಅದೆಂತೆಂದಡೆ: ``ಯಥಾ ಫೇನತರಂಗಾಣಿ ಸಮುದ್ರೇ ತೂರ್ಜಿತೇ ಪುನಃ| ಉತ್ಪದ್ಯಂತೇ ವಿಲೀಯಂತೇ ಮಯಿ ಸರ್ವಂ ಜಗತ್ತಥಾ”|| ಎಂದುದಾಗಿ. ಇನ್ನು ವೈಷ್ಣವನ ಯುಕ್ತಿ ಎಂತೆಂದಡೆ: “ಕರ್ಮಕರ್ತೃ, ಮಾಯಾಧೀನ ಜಗತ್ತು” ಎಂದು. ಇದು ಕ್ರಮವಲ್ಲ, ಮತ್ತೆ ಹೇಗೆಂದಡೆ: “ರೂಪಾದಿ ಸಕಲಂ ವಿಶ್ವಂ ವಿಶ್ವರೂಪಾಧಿಕಃ ಪರಃ| ಸರ್ವಾದಿ ಪರಿಪೂರ್ಣತ್ವಂ ಪರವಸ್ತು ಪ್ರಮಾಣತಃ“|| ಎಂದುದಾಗಿ. ಇನ್ನು ಗಾಣಪತ್ಯನ ಯುಕ್ತಿ ಎಂತೆಂದಡೆ: ‘ಅತೀತವೆ ವಸ್ತು, ಜಗತ್ತು ಮಾಯಾತಂತ್ರ’ ಎಂದು. ಇದು ಕ್ರಮವಲ್ಲ; ಮತ್ತೆ ಹೇಗೆಂದಡೆ: “ಪರಾಧೀನಂ ಜಗತ್ಸರ್ವಂ ಪರಿಣಾಮೋತ್ತರಃ ಪ್ರಭುಃ| ಯದ್ವಿಲಾಸೋ ವಿಲಾಸಾಯ ಮಹತೋ ನ ಚ ವಹ್ನಿವತ್”||ಎಂದುದಾಗಿ. ಇನ್ನು ಸೌರನಯುಕ್ತಿ ಎಂತೆಂದಡೆ: ‘ಘಟಾದಿ ಮೂಲ ಬಿಂದು, ದಿಟವಪ್ಪುದೆ ನಾದʼ ಎಂದು, ಇದು ಕ್ರಮವಲ್ಲ; ಮತ್ತೆ ಹೇಗೆಂದಡೆ: “ನಾದಾತೀತಮಿದಂ ವಿಶ್ವಂ ಬಿಂದ್ವತೀತೋ ಸ್ವಯಂ ಪ್ರಭುಃ| ಅನಾಮಯೋ ನಿರಂಜನೋ ನಿಶ್ಚಯಃ ಪರಮೇಶ್ವರಃ”|| ಎಂದುದಾಗಿ. ಇನ್ನು ಕಾಪಾಲಿಕನ ಯುಕ್ತಿ ಎಂತೆಂದಡೆ: ‘ಜೋಗೈಸುವ ವಿಶ್ವಂ ಮಹಾಜೋಗಿ ಜೋಗೈವ ಈಶಂ' ಎಂದು. ಇದು ಕ್ರಮವಲ್ಲ; ಮತ್ತೆ ಹೇಗೆಂದಡೆ: “ಬ್ರಹ್ಮಾದಿಸ್ತಂಬಪರ್ಯಂತಂ ಸಿದ್ಧಯೋಗಮುದಾಹೃತಂ| ನಿರಂಜನಂ ನಿರಾಕಾರಂ ನಿರ್ಮಾಯಂ ಪರಮಾಶ್ರಯಂ”|| ಎಂದುದಾಗಿ. ಪರಾಪರವಸ್ತು ಪರಮಾರ್ಥವಿಲಾಸಿಯಾಗಿ, ಪರಶಕ್ತಿಲೋಲನಾಗಿ, ಪರಮಾಶ್ರಯ ಪರಿಪೂರ್ಣನಾಗಿ, ನಾನಾವಿಚಿತ್ರವಿನೋದನಾಗಿ, ಪರಮಾತ್ಮ ಅಂತರಾತ್ಮನಾಗಿ, ಅಂತರಾತ್ಮ ಜೀವಾತ್ಮನಾಗಿ, ಜೀವಾತ್ಮ ಅಖಿಲಾತ್ಮನಾಗಿ, ಅಖಿಲಾತ್ಮ ಏಕಾತ್ಮನಾಗಿ- ನಿರಂಜನ ನಿರುಪಮ ನಿರ್ವಿಕಾರ ನಿತ್ಯಾನಂದ ನಿಶ್ಚಲ ನಿಶ್ಚಿಂತ ನಿರಾಳ ನಿಜಾತ್ಮಸುಖ ನೀನೇ ಕೂಡಲಚೆನ್ನಸಂಗಮದೇವಾ.