Index   ವಚನ - 1343    Search  
 
ನಿಮ್ಮ ಅಂಗದಲ್ಲಿರ್ದ ಅವಗುಣಂಗಳ ವಿಚಾರಿಸದೆ ಜಂಗಮದಲ್ಲಿ ಅವಗುಣವ ವಿಚಾರಿಸುವ ದುರಾಚಾರಿಗಳು ನೀವು ಕೇಳಿರೆ: ಅದೆಂತು ಅಂಗದಲ್ಲಿ ಅನಾಚಾರವುಂಟೆಂಬುದ, ನಾನು ವಿಚಾರಿಸಿ ಪೇಳುವೆನು ಕೇಳಿರೆ: ನೀವು ಪರಸ್ತ್ರೀಯರ ನೋಡುವ ಕಣ್ಣುಗಳನೊಳಗಿಟ್ಟುಕೊಂಡಿರ್ಪುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ? ತನ್ನ ಸ್ತ್ರೀಯಲ್ಲದೆ ಅನ್ಯಸ್ತ್ರೀಯಲ್ಲಿ ಆಚರಿಸುವುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ? ಅಂಗದ ಮೇಲಣ ಲಿಂಗವ ಪೂಜಿಸಿ ಜಂಗಮವ ನಿಂದಿಸುವುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ? ಇನ್ನು ಹೇಳುವಡೆ ಅವಕೇನು ಕಡೆಯಿಲ್ಲ. ಇದನರಿದು, ನಮ್ಮ ಜಂಗಮಲಿಂಗವ ಮಾಯೆಯೆನ್ನದಿರಿ ಅಥವಾ ಮಾಯೆಯೆಂದಿರಾದಡೆ, ಆ ದ್ರೋಹ ಲಿಂಗವ ಮುಟ್ಟುವುದು. ಅದೆಂತೆಂದಡೆ: ಬೀಜಕ್ಕೆ ಚೈತನ್ಯವ ಮಾಡಿದಡೆ, ವೃಕ್ಷಕ್ಕೆ ಚೈತನ್ಯವಪ್ಪುದು. ಆ ಅಂತಹ ಬೀಜಕ್ಕೆ ಚೈತನ್ಯವ ಮಾಡದಿರ್ದಡೆ ವೃಕ್ಷ ಫಲವಾಗದಾಗಿ, ಬೀಜಕ್ಕೆ ಕೇಡಿಲ್ಲ. ಅದು ನಿಮಿತ್ತವಾಗಿ, ಬೀಜವೆ ಜಂಗಮಲಿಂಗವು. ಆ ಜಂಗಮಲಿಂಗವೆಂಬ ಬೀಜವನು ಸುರಕ್ಷಿತವ ಮಾಡಿದಡೆ ಲಿಂಗವೆಂಬ ವೃಕ್ಷ ಫಲಿಸುವುದಯ್ಯಾ. ಕೂಡಲಚೆನ್ನಸಂಗಮದೇವಾ.