Index   ವಚನ - 1353    Search  
 
ನೆಲನೊಂದೆ ಜಲ[ನೊಂದೆ] ಎಂಬುದ ಎಲ್ಲ ಲೋಕವು ಬಲ್ಲುದು ನೋಡಿರೆ! ನೆಲ ಶುದ್ಧವೆಂಬಿರಿ: ನೆಲದೊಳಗಿಪ್ಪ ಎಂಬತ್ತುನಾಲ್ಕುಲಕ್ಷ ಜೀವರಾಸಿಗಳು ಅಲ್ಲಿಯೆ ಹುಟ್ಟಿ ಅಲ್ಲಿ ಮಡಿವವಾಗಿ ಆ ನೆಲ ಶುದ್ಧವಲ್ಲ ನಿಲ್ಲು. ಜಲ ಶುದ್ಧವೆಂಬಿರಿ: ಜಲದೊಳಗಿಪ್ಪ ಇಪ್ಪತ್ತೊಂದು [ಲಕ್ಷ] ಜೀವರಾಸಿಗಳು ಅಲ್ಲಿಯೆ ಹುಟ್ಟಿ ಅಲ್ಲಿಯೆ ಮಡಿವವಾಗಿ ಆ ಜಲ ಶುದ್ಧವಲ್ಲ ನಿಲ್ಲು. ನಿಮ್ಮ ತನು ಶುದ್ಧವೆಂಬಿರಿ; ತನುವಿನೊಳಗಿಪ್ಪ ಅಷ್ಟಮದಗಳೆಂಬ ಭವಿಗಳಂ ಕಟ್ಟಿ ನಿಲಿಸಲರಿಯಲಿಲ್ಲವಾಗಿ ಆ ತನು ಶುದ್ಧವಲ್ಲ ನಿಲ್ಲು. ನಿಮ್ಮ ಹಸ್ತಂಗಳು ಶುದ್ಧವೆಂಬಿರಿ: ಒಂದು ಹಸ್ತ ಜಿಹ್ವೆಯೊಳಗಾಡುವದು ಒಂದು ಹಸ್ತ ಗುಹ್ಯದೊಳಗಾಡುವುದು- [ಆ] ಹಸ್ತಂಗಳು ಶುದ್ಧವಲ್ಲ ನಿಲ್ಲು. ನಿಮ್ಮ ನಯನಂಗಳು ಶುದ್ಧವೆಂಬಿರಿ: ನಯನದಲ್ಲಿ ನೋಡಿದಲ್ಲಿ ಕೂಡುವಿರಾಗಿ ನಿಮ್ಮ ನಯನಂಗಳು ಶುದ್ಧವಲ್ಲ ನಿಲ್ಲು- ಇಂತೀ ತಮ್ಮ ಅಶುದ್ಧವಂ ತಾವು ಕಳೆಯಲರಿಯದೆ, ಇದಿರ ಅಶುದ್ಧವಂ ಕಳೆವೆವೆಂದಡೆ, ನಾಚಿತ್ತು ನೋಡಾ ಎನ್ನ ಮನವು. ಭಕ್ತಿ ವಿಶ್ವಾಸದಿಂದ ಗುರುಲಿಂಗಜಂಗಮದ ಪಾದಾರ್ಚನೆಯಂ ಮಾಡಿ. ಪಾದೋದಕ ಪ್ರಸಾದವಂ ಕೊಂಬ ಭಕ್ತನ ಶೀಲವೇ ಶೀಲವಲ್ಲದೆ ಉಳಿದವರದಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.