Index   ವಚನ - 1411    Search  
 
ಪ್ರಾಣಲಿಂಗ ಪ್ರಾಣಲಿಂಗವೆಂಬರು, ಪ್ರಾಣಲಿಂಗವೆಂಬುದಾರಿಗುಂಟಯ್ಯಾ? ಮೂವರಿಗೆ ಹುಟ್ಟಿದ ಲಿಂಗವು ತನ್ನ ಪ್ರಾಣಲಿಂಗವಾದ ಪರಿಯಿನ್ನೆಂತೊ? ವಸುಧೆಗೆ ಹುಟ್ಟಿದ ಲಿಂಗವನು ವಶಕ್ಕೆ ತಂದು, ತನ್ನ ದೆಸೆಯಲ್ಲಿ ನಿಲಿಸುವ ಪರಿಯಿನ್ನೆಂತೊ? ಭೂಮಿಗೆ ಹುಟ್ಟಿ ಶಿಲೆಯಾದ, ಕಲುಕುಟಿಗ ಮುಟ್ಟಿ ರೂಪಾದ, ಗುರುಮುಟ್ಟಿ ತೇಜವಾದ. ಹಿಂದೆ ಮುಟ್ಟಿದವರಿಗೆಲ್ಲ ಪ್ರಾಣಲಿಂಗವಾದ ಪರಿಯಿನ್ನೆಂತೊ? ತನ್ನ ಪ್ರಾಣ ಮುಂದೆ ಹೋಗಿ ಲಿಂಗ ಹಿಂದುಳಿದಡೆ ಪ್ರಾಣ ಲಿಂಗವಾದ ಪರಿಯಿನ್ನೆಂತೊ? ಹಸಿವು ತೃಷೆ ವಿಷಯ ನಿದ್ರೆ ಜಾಡ್ಯ, ಇಂತಿವೆಲ್ಲವನತಿಗಳೆದು ನಿರ್ಮಲದೇಹಿಯಾಗಿ ಹೃದಯಕಮಲದೊಳು ವಿಮಲವಪ್ಪ ಶ್ರೀಗುರುಮೂರ್ತಿ, ಪರಂಜ್ಯೋತಿ ಎಂದೆನಿಸುವ ಲಿಂಗವ, ಮಲಿನವಿಡಿಯದ ಕಾಯದ ಸೆಜ್ಜೆಯೊಳು ದೃಢದೊಳ್ಬಿಜಯಂಗೈಸಿ, ಸಪ್ತಧಾತು ಅಷ್ಟಮದವಿಲ್ಲದೆ ಜ್ಞಾನದೋಗರವನರ್ಪಿಸಿ, ಸುಜ್ಞಾನಬುದ್ಧಿಯೊಳು ಪ್ರಸಾದವ ಸ್ವೀಕಾರವ ಮಾಡಿ, ನಿತ್ಯಸುಖಿಯಾಗಿ ಆಡುತಿಪ್ಪ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೊಬ್ಬನೆ ಪ್ರಾಣಲಿಂಗ ಸಂಬಂಧಿ. ಪ್ರಾಕ್‍ಶುದ್ಧಿಗಳೆಲ್ಲ ಲಿಂಗಲಾಂಛನಧಾರಿಗಳೆಂದೆನಿಸುವರು.