Index   ವಚನ - 1440    Search  
 
ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ? ವಿಷ್ಣು ನಿಮ್ಮ ಬಲ್ಲಡೆ ಭುಜವ ಸುಡಿಸಿಕೊಂಬನೆ? ಶ್ರವಣ ನಿಮ್ಮ ಬಲ್ಲಡೆ ಬತ್ತಲೆಯಾಗಿ ತಲೆಯ ತರಿಸಿಕೊಂಬನೆ? ಕೃತಯುಗದಲ್ಲಿ ಶಿವನ ಹೊಗಳುವ ವೇದವನೋದಿ ಗಜಯಾಗವ ಮಾಡಿ ಆನೆಯ ತಿನ್ನ ಹೇಳಿತ್ತೆ ನಿಮ್ಮ ವೇದ? ತ್ರೇತಾಯುಗದಲ್ಲಿ ಶಿವನ ಹೊಗಳುವ ವೇದವನೋದಿ ಅಶ್ವಯಾಗವ ಮಾಡಿ ಕುದುರೆಯ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ? ದ್ವಾಪರಯುಗದಲ್ಲಿ ಶಿವನ ಹೊಗಳುವ ವೇದವನೋದಿ ಮಹಿಷಹೋಮವ ಮಾಡಿ ಕೋಣನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ? ಕಲಿಯುಗದಲ್ಲಿ ಶಿವನ ಹೊಗಳುವ ವೇದವನೋದಿ ಅಜಯಾಗವ ಮಾಡಿ ಹೋತನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ? ಬ್ರಾಹ್ಮಣನೆ ದೈವವೆಂದಾರಾಧಿಸಿ ಗೌತಮ ಗೋಹತ್ಯವಾದುದಿಲ್ಲವೆ? ಬ್ರಾಹ್ಮಣನೆ ದೈವವೆಂದಾರಾಧಿಸಿ ಪಂಚಪಾಂಡವರು ದೇಶಭ್ರಷ್ಟರಾಗರೆ? ಬ್ರಾಹ್ಮಣನೆ ದೈವವೆಂದಾರಾಧಿಸಿ ಹರಿಶ್ಚಂದ್ರ ಚಂಡಾಲಗೆ ಮಾರಿಸಿಕೊಳ್ಳನೆ? ಬ್ರಾಹ್ಮಣನೆ ದೈವವೆಂದಾರಾಧಿಸಿ ಬಲಿಚಕ್ರವರ್ತಿ ಬಂಧನಕ್ಕೊಳಗಾಗನೆ? ಬ್ರಾಹ್ಮಣನೆ ದೈವವೆಂದಾರಾಧಿಸಿ ಮುಕ್ತಿಗೆ ಸಂದವರಿಲ್ಲ. ಬಲ್ಲಡೆ ನೀವು ಹೇಳಿರೊ, ಅರಿಯದಿದ್ದರೆ ನೀವು ಕೇಳಿರೊ: ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ; ಬಾಹೂರ ಬೊಮ್ಮಯ್ಯಗಳು ಕಲ್ಲ ನಂದಿಗೆ ಕಬ್ಬು ಮೇಯಿಸಿದ್ದಲ್ಲವೆ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಗೊಬ್ಬೂರ ಬಿಬ್ಬಿಬಾಚಯ್ಯಗಳು ಪ್ರಸಾದದಿಂದ ಗೊಬ್ಬೂರ ಸುಟ್ಟುದಿಲ್ಲವೆ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಶಂಕರ ದಾಸಿಮಯ್ಯಗಳು ಸರ್ವಭೂತಂಗಳ ಕೈಯಲ್ಲಿ ಕೊಟ್ಟಣವ ಕುಟ್ಟಿಸಲಿಲ್ಲವೆ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಹಾವಿನಹಾಳ ಕಲ್ಲಯ್ಯಗಳು ಶ್ವಾನನ ಬಾಯಿಂದ ವೇದವನೋದಿಸಲಿಲ್ಲವೆ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಸಿಂಧುಬಲ್ಲಾಳ ಸ್ವಯಲಿಂಗಿಯಾಗಲಿಲ್ಲವೆ? ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಸಿರಿಯಾಳಸೆಟ್ಟಿ ಕಂಚಿಪುರವ ಕೈಲಾಸಕ್ಕೆ ಕೊಂಡೊಯ್ಯಲಿಲ್ಲವೆ? ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಮುಂದೆ ನುತಿಸಿ ಹಿಂದೆ ಆಡಿಕೊಂಬ ಪರವಾದಿ ಹೊಲೆಯರ ಬಾಯಲ್ಲಿ ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ ಅಂಗುಳವ ಮೆಟ್ಟಿಕ್ಕುವನೆಂದ. ಕೂಡಲಚೆನ್ನಸಂಗಮದೇವ.