ಭೂತಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ ಬಳಿಕ
ಆ ಶಿಷ್ಯನೆ ಜಂಗಮವಾಗಿ ಗುರುವಿನ ಮಠಕ್ಕೆ ನಡೆದು ಬಂದರೆ
ಗುರುವೆಂಬ ಹಮ್ಮಿಲ್ಲದೆ ಪರಮಗುರುವೆಂದು
ಪಾದಾರ್ಚನೆಯಂ ಮಾಡೂದು ಆಚಾರ,
ನಾಚಿ ಮಾಡದಿದ್ದರೆ ನಾಯಕ ನರಕ.
ಆ ಜಂಗಮ ಶಂಕೆಯಿಲ್ಲದೆ
ಪಾದಾರ್ಚನೆಯ ಮಾಡಿಸಿಕೊಂಬುದೆ ಕರ್ತೃತ್ವ,
ಶಂಕೆಗೊಂಡಡೆ ಪಂಚಮಹಾಪಾತಕ.
ಹೀಂಗಲ್ಲದೆ ಗುರುವೆಂಬ ಹಮ್ಮು,
ಶಿಷ್ಯನೆಂಬ ಶಂಕೆಯುಳ್ಳನ್ನಬರ ರೌರವನರಕದಲ್ಲಿಕ್ಕುವ
ಕೂಡಲಚೆನ್ನಸಂಗಮದೇವ.