Index   ವಚನ - 1496    Search  
 
ಮನ ಲಿಂಗವಾಗಿ ಘನ ವೇದ್ಯವಾದೆನೆಂದು ನುಡಿವವ, ತಾ ಲಿಂಗಪ್ರಸಾದವ ಕೊಂಬಾಗ ಭವಿದೃಷ್ಟಿ ಸೋಂಕಿತ್ತೆಂದು ಬಿಡುವ ಅನಾಚಾರವ ನೋಡಾ! ಆಚಾರವನೆ ಅನಾಚಾರವ ಮಾಡಿ, ಅನಾಚಾರವನೆ ಆಚಾರವೆಂದು ಸಂಬಂಧಿಸಿಕೊಂಬ ಪರಿಯ ನೋಡಾ! ಇದು ಕಾರಣ-ಸಂಕಲ್ಪಿತವ ಮಾಡಲಾಗದು. ಸಂಕಲ್ಪಿತದಲ್ಲಿ ಶಿವನಿಲ್ಲ ಪ್ರಸಾದವಿಲ್ಲ. ಲಿಂಗ ಮುಟ್ಟಿ ತಾ ಲಿಂಗವಾದ ಬಳಿಕ ಭವವಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.