Index   ವಚನ - 1505    Search  
 
ಮಲವಿಶಿಷ್ಟರಾದ ಮಾನವರು ಬಹಿರಂಗದ ತೀರ್ಥವ ಹೊಕ್ಕು, ಅಲ್ಲಿ ಕಾಲು ಕೈ ಮುಂತಾದ ಸರ್ವಾಂಗವ ತೊಳೆದು, ಪರಿಶುದ್ಧರಾದೆವೆಂದು ಭಾವಿಸುತಿಪ್ಪರು ನೋಡಾ. ಮತ್ತೆ ಆ ಮಲಿನವಾದ ಜಲವನೆ ತೀರ್ಥವೆಂದು ಲಿಂಗಕ್ಕಭಿಷೇಕಂಗೆಯ್ಯುತಿಪ್ಪರು ನೋಡಾ. ಶಿವಜ್ಞಾನಿಗಳ ಪಾದೋದಕವು ಪರಿಶುದ್ಧವಲ್ಲವೆಂದು ಗಳಹುತಿಪ್ಪರು ನೋಡಾ. ಇಂತೀ ಮರುಳರಾಟವ ಕಂಡು, ನಮ್ಮ ಪ್ರಮಥರು ಗಹಗಹಿಸಿ ನಗುತಿಪ್ಪರು ನೋಡಾ ಕೂಡಲಚೆನ್ನಸಂಗಮದೇವಾ.