Index   ವಚನ - 1570    Search  
 
ಲಿಂಗದಿಂದಲಿ ಗುರು, ಲಿಂಗದಿಂದಲಿ ಜಂಗಮ, ಲಿಂಗದಿಂದಲಿ ಪಾದೋದಕ ಪ್ರಸಾದ, ಲಿಂಗದಿಂದಲಿ ಸರ್ವವೆಲ್ಲಾ ಆಯಿತ್ತು. [ಅವು] ನಮ್ಮ ಕರಸ್ಥಲದೊಳಗೆ ಇಲ್ಲವೆಂಬ ಸುರಾಭುಂಜಕರ ಮಾತ ಕೇಳಲಾಗದು. ಅದೆಂತೆಂದರೆ: ಲಿಂಗ ಘನೆಂಬಿರಿ, ಅದೆಂತು ಘನವಹುದು? ನಮ್ಮ ಜಂಗಮದೇವರ [ಅವುಟು] ಕೋಟಿರೋಮ ಕೂಪದೊಳಗೆ, ಒಂದು ರೋಮ ತಾ ಇಷ್ಟಲಿಂಗ. ಇಷ್ಟಲಿಂಗವನೆ ಘನವ ಮಾಡಿ ದೃಷ್ಟಜಂಗಮವನತಿಗಳೆವ ಭ್ರಷ್ಟಹೊಲೆಯರ ಮಾತ ಕೇಳಲಾಗದು. ಅದೆಂತೆಂದರೆ: ಎನ್ನ ಜಂಗಮದೇವರ ಹಾಗೆ ಪಾದಾರ್ಚನೆಯ ಮಾಡಿಸಿಕೊಂಡು ಪಾದತೀರ್ಥ ಪ್ರಸಾದವ ಕೊಟ್ಟು ಪಾಲಿಸಬಲ್ಲುದೆ ಲಿಂಗವು? ಮತ್ತೆನ್ನ ಜಂಗಮದೇವರ ಹಾಗೆ ಒಕ್ಕು ಮಿಕ್ಕುದನಿಕ್ಕಿ ಸಲಹಬಲ್ಲುದೆ ಲಿಂಗವು? ಮತ್ತೆನ್ನ ಜಂಗಮದೇವರ ಹಾಗೆ, ಅರ್ಥಪ್ರಾಣ ಅಭಿಮಾನವನಿತ್ತಡೆ ಸ್ವೀಕಾರವ ಮಾಡಬಲ್ಲುದೆ ಲಿಂಗವು? ಲಿಂಗ ಆವುದನು ಕೊಡಲರಿಯದು ರಾಸಿಗೆ ಅರ್ಚಿಸಿದ ಲಚ್ಚಣ ರಾಸಿಯನೊಳಕೊಂಬುದೆ, ರಾಸಿಯ ಒಡೆಯನಲ್ಲದೆ? ಭಕ್ತನೆಂಬ ರಾಸಿಗೆ ಲಿಂಗವೆಂಬ ಲಚ್ಚಣ ಇದಕ್ಕೆನ್ನ ಜಂಗಮದೇವರೆ ಮುದ್ರಾಧಿಪತಿ ಕಾಣಾ ಕೂಡಲಚೆನ್ನಸಂಗಮದೇವಾ.