Index   ವಚನ - 1617    Search  
 
ವೇದವೇದಾರ್ಥಸಾರಾಯದಿಂದ ಆರುಶಾಸ್ತ್ರ ಹದಿನೆಂಟು ಪುರಾಣಂಗಳಾದವು. ಆ ಪುರಾಣಂಗಳನರಿವುದರಿಂದೆ ಜ್ಯೋತಿರ್ಜ್ಞಾನವಾಯಿತ್ತು. ಆ ಜ್ಯೋತಿರ್ಜ್ಞಾನದಿಂದೆ ಮತಿಜ್ಞಾನ, ಶ್ರುತಜ್ಞಾನ, ಮನಪರಿಪೂರ್ಣಜ್ಞಾನ, ಅವಧಿಜ್ಞಾನ ಕೇವಲಜ್ಞಾನ- ಇಂತೀ ಪಂಚಜ್ಞಾನವೆ ಪಂಚಸ್ಥಲವಾಯಿತ್ತು. ಮತಿಜ್ಞಾನವುಳ್ಳಾತನೆ ಭಕ್ತ, ಶ್ರುತಜ್ಞಾನವುಳ್ಳಾತನೆ ಮಹೇಶ್ವರ, ಮನಪರಿಪೂರ್ಣ ಜ್ಞಾನವುಳ್ಳಾತನೆ ಪ್ರಸಾದಿ, ಅವಧಿಜ್ಞಾನವುಳ್ಳಾತನೆ ಪ್ರಾಣಲಿಂಗಿ, ಕೇವಲಜ್ಞಾನವುಳ್ಳಾತನೆ ಶರಣ, ಶರಣಸ್ಥಲವೆಂಬುದು ಭವಂ ನಾಸ್ತಿ. ಪಂಚಜ್ಞಾನಕ್ಕೆ ಮೂಲವಾದ ಜ್ಯೋತಿರ್ಜ್ಞಾನವೆ ಪಂಚಸ್ಥಲದಲ್ಲಿ ಏಕಾಕಾರವಾದ ಐಕ್ಯನು. ಇಂತೆಂದುದಾಗಿ ಕೂಡಲಚೆನ್ನಸಂಗಯ್ಯನಲ್ಲಿ ಪಂಚಸ್ಥಲದ ನೆಲೆಯ ಬಲ್ಲ ಐಕ್ಯ ಬಸವಣ್ಣಂಗೆ ನಮೋ ನಮೋ ಎಂಬೆನು.