Index   ವಚನ - 1626    Search  
 
ಶರಣನಾದಡೆ ಸ್ವಸ್ತ್ರೀ ಪರಸ್ತ್ರೀಯರ ಅಪ್ಪಿನ ಸುಖವ ಹಿಂಗಿರಬೇಕು. ಶರಣನಾದಡೆ ಪ್ರಪಂಚದ ವಿಷಯಂಗಳ ಸುಖವ ಹಿಂಗಿರಬೇಕು. ಶರಣನಾದಡೆ, ಪುತ್ರೇಷಣ, ವಿತ್ತೇಷಣ, ದಾರೇಷಣವೆಂಬ ಈಷಣತ್ರಯಂಗಳ ಹಿಂಗಿರಬೇಕು. ಶರಣನಾದಡೆ ದುರ್ಜನರ ಸಂಗವ ಹಿಂಗಿರಬೇಕು. ಶರಣನಾದಡೆ, ಲಿಂಗಪತಿಧ್ಯಾನವಲ್ಲದೆ ಅನ್ಯ ದೈವದ ಧ್ಯಾನವ ಹಿಂಗಿರಬೇಕು. ಮತ್ತಂ ಉತ್ತರವಾತುಲೇ: “ಈಷಣತ್ರಯ ವರ್ಜಿತಾಃನ್ನಿತ್ಯಮೇಕಾಂತವಾಸಿನಃ ಲಿಂಗಧ್ಯಾನರತೋ ನಿತ್ಯಂ ಶರಣಸ್ಥಲಮುತ್ತಮಂ” ಎಂದುದಾಗಿ- ಅದೆಂತೆಂದೊಡೆ-ಸಾಕ್ಷಿ, ಶಿವಧರ್ಮೇ. “ಪತಿರ್ಲಿಂಗಂ ಸತೀಚಾಹಮಿತಿ-ಯುಕ್ತಸ್ಸದಾ ತಥಾ| ಪ್ರಪಂಚಸ್ಯಸುಖಂನಾಸ್ತಿ ಶರಣಾಖ್ಯಮುದೀರಿತಂ"|| ಇಂತಲ್ಲದೆ ಬರಿಯ ವಾಗದ್ವೈತದಿಂದ ಶರಣನಾಗಬಾರದು ಕೂಡಲಚೆನ್ನಸಂಗಮದೇವಾ.