Index   ವಚನ - 1642    Search  
 
ಶಿವಭಕ್ತಿಯೆ ಶಿವಾನುಗ್ರಹಕ್ಕೆ ಕಾರಣವಾಗಿರ್ಪುದು ನೋಡಾ. ಶಿವಾನುಗ್ರಹವೆ ಇಹಪರ ಸುಖಕ್ಕೂ ಪರಮಾನಂದ ಪ್ರಾಪ್ತಿಗೂ ಕಾರಣವಾಗಿರ್ಪುದು ನೋಡಾ. "ಯೋಗೇನ ತು ಪರಾಭಕ್ತಿಃ ಪ್ರಸಾದಸ್ತದನಂತರಂ ಪ್ರಸಾದಾನ್ಮುಚ್ಯತೇ ಜಂತುರ್ಮುಕ್ತಶ್ಶಿವಸಮೋ ಭವೇತ್" ಎಂದಿಹುದನಾರಯ್ಯದೆ, ಎನ್ನ ನಂಬುಗೆ ಎನ್ನ ಕಟ್ಟುಕ್ರಿಯಾದಿಗಳಿಂದ ಸರ್ವಸುಖ ಪಡೆವೆನೆಂಬ ಜೀವಭಾವದ ಹಮ್ಮಿನ ಬಿಮ್ಮುಹತ್ತಿ ಮುಂದುಗಾಣದ ಮಂದಮತಿಗೆ ಮೆಚ್ಚುವರೆ ಕೂಡಲಚೆನ್ನಸಂಗಯ್ಯನ ಶರಣರು.