ಶ್ರೀಗುರು ಉಪದೇಶವ ಮಾಡುವಲ್ಲಿ
ಭಕ್ತಗಣಸಾಕ್ಷಿಯಾಗಿ ಹಸ್ತಮಸ್ತಕ ಸಂಯೋಗವ ಮಾಡಿ,
ಆ ಮಸ್ತಕಾಗ್ರದೊಳಿಪ್ಪ ನಿತ್ಯನಿರಂಜನ ಶಿವಕಳೆಯ
ಭಾವದೊಳು ಭರಿತವೆನಿಸಿ,
ಮನದೊಳು ಮಂತ್ರಯುಕ್ತದಿಂ ಮೂರ್ತಿಗೊಳಿಸಿ,
ಚರಪಾದತೀರ್ಥಪ್ರಸಾದದೊಳು ಬೆರಸಿ-
ಇಂತೀ ಗುರುಚರಪರರಾಜ್ಞೆಯಲಿ
ಪ್ರಾಣಲಿಂಗವ ಕರಸ್ಥಲಕ್ಕೆ ಬಿಜಯಂಗೈಸಿ ಕೊಟ್ಟ ಬಳಿಕ,
ಗುರು ಕೊಟ್ಟ ಇಷ್ಟಲಿಂಗದಲ್ಲಿ
ನಿಷ್ಠೆಗಟ್ಟಿಗೊಂಡು ಮನಮುಟ್ಟಿ ಪೂಜಿಸಿ
ಪ್ರಸಾದವಂ ಪಡೆದು ನಿಜಮುಕ್ತಿಯನೈದಲರಿಯದೆ
ಈ ಗುರು ಕೊಟ್ಟ ಇಷ್ಟಲಿಂಗವ ಬಿಟ್ಟು
ಗುರುಕಾರುಣ್ಯ ಚರಪ್ರಸಾದ ಹೊರಗಾದ,
ಧರೆಯ ಮೇಲಣ ಪ್ರತಿಷ್ಠೆಯನುಳ್ಳ
ಭವಿಶೈವದೈವಕ್ಕೆರಗುವ
ದುರಾಚಾರಿಗಳಿಗೆ ಅಘೋರನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಯ್ಯ.