Index   ವಚನ - 1694    Search  
 
ಸತ್ಯಾಚಾರಯುಕ್ತವಾದ ಭಕ್ತಜಂಗಮವನರಸಿಕೊಂಡು ಹೋಗಿ ಭಕ್ತದೇಹಿಕದೇವನೆಂಬ ಶ್ರುತಿಯನರಿದು ಪ್ರಸಾದಕ್ಕೆ ಸೂತಕವ ಮಾಡುವ ಪಾತಕರ ವಿಧಿಯಿನ್ನೆಂತೊ? 'ಶರೀರಮರ್ಥ ಪ್ರಾಣಂಚ ಸದ್ಗುರುಭ್ಯೋ ನಿವೇದಯೇತ್' ಎಂದುದಾಗಿ ಆತನ ತನುಮನಧನಂಗಳೆಲ್ಲಾ ಗುರುವಿನ ಸೊಮ್ಮು, ಆತನ ಸರ್ವಾಂಗವೆಲ್ಲವೂ ಪ್ರಸಾದಕ್ಷೇತ್ರ, ಆ ಪ್ರಸಾದಕ್ಷೇತ್ರದೊಳಗಿದ್ದವರೆಲ್ಲರೂ ಪ್ರಸಾದಮಯ ಆ ಪ್ರಸಾದಮಯದೊಳಗಿದ್ದವರೆಲ್ಲರೂ ಪ್ರಸಾದದ ಬೆಳೆ, ಪ್ರಸಾದದಾಗು, ಆತ ಮುಟ್ಟಿದ ಪದಾರ್ಥವೆಲ್ಲವೆಲ್ಲವೂ ಪ್ರಸಾದವಪ್ಪುದು ಆತ ಮಾಡಿದುದೆಲ್ಲವು ಪ್ರಸಾದದ ಕಾಯಕ, ಪ್ರಸಾದದ ನಡೆ, ಪ್ರಸಾದದ ನುಡಿ. ಇಂತಪ್ಪ ಪ್ರಸಾದವಿದ್ದಲ್ಲಿಗೆ ಹೋಗಿ 'ಅದು ಬೇಕು ಇದು ಬೇಕು' ಎಂದು ಓಗರಪದಾರ್ಥದ ಸವಿಯನರಸುವ ಪಾತಕದ್ರೋಹಿಗಳ ಮೆಚ್ಚ ನಮ್ಮ ಕೂಡಲಸಂಗಮದೇವ.