Index   ವಚನ - 1730    Search  
 
ಹಂದಿಯ ದಾಡಿಯಲ್ಲಿ ಹೊಯ್ಸಿಕೊಂಡ ಹಿರಣ್ಯಕ, ಅರೆಮಾನಿಸನುಗುರ ಕೊನೆಯಲ್ಲಿ ಸೀಳಿಸಿಕೊಂಡ ಹಿರಣ್ಯಾಕ್ಷ; ತಳಿಗೆಗೆ ತಲೆಗೊಟ್ಟ ಶಿಶುಪಾಲ, ಕುಮಾರಿಯ ಕೈಯಲ್ಲಿ ಹೊಡಿಸಿಕೊಂಡ ಮಹಿಷಾಸುರ; ಕಪಿಯ ಬಾಲದಲ್ಲಿ ಕಟ್ಟಿಸಿಕೊಂಡ ರಾವಣ. ಹೊಲೆಯಂಗೆ ಆಳಾದ ಹರಿಶ್ಚಂದ್ರಮಹಾರಾಯ, ಜೂಜಿಂದ ಭಂಗಿತರಾದರು ಪಾಂಡವರು, ದುರ್ವಾಸನಿಂದ ಸಮಚಿತ್ತನಾದ ಪುರಂದರ, ತಾಯ ತಲೆತಿವಿದ ಪರಶುರಾಮ, ಸತಿ ಹೇಳಿತ ಕೇಳಿದ ಶ್ರೀರಾಮ, ಹಕ್ಕಿಂದೊಪ್ಪಗೆಟ್ಟ ದೇವೇಂದ್ರ, ಅಪರಾಹ್ನದರಿದ್ರನೆನಿಸಿಕೊಂಡ ಕರ್ಣ, ಮಡುಹೊಕ್ಕು ಅಡಗಿದ ದುರ್ಯೋಧನ; ಕೇಡಿಂಗೆ ಹಿಂದು ಮುಂದಾದರು ಭೀಷ್ಮರು, ವೇಶ್ಯೆಯ ಮನೆಗೆ ಕಂಬಿಯ ಹೊತ್ತ ವಿಕ್ರಮಾದಿತ್ಯ, ಕಲ್ಯಾಣದಲ್ಲಿ ಬೆಳ್ಳಿಯ ಗುಂಡಾದ ವ್ಯಾಲ, ಬೆಳ್ಳಿಯ ಕಂದಾಲದ ಕೆರೆಯ ಹೊಕ್ಕ ಕೋರಾಂಟ; ಚಕ್ರಕ್ಕೆ ತಲೆಗೊಟ್ಟ ನಾಗಾರ್ಜುನ. ಹಗೆಯ ಕಂಪಲ ಹೊಕ್ಕ ರತ್ನಘೋಷ, ರಾಹುವಿಗೊಳಗಾದ ಚಂದ್ರ, ಕಟ್ಟಿಂಗೊಳಗಾದುದು ಸಮುದ್ರ, ಶಿರವ ಹೋಗಾಡಿಸಿಕೊಂಡ ಬ್ರಹ್ಮ, ಕಾಲಿಂದ ಮರಣವಾಯಿತ್ತು ಕೃಷ್ಣಂಗೆ, ನೀರಿನಿಂದ ಕೆಟ್ಟ ಚಂಡಲಯ್ಯ, ಪುತ್ರರಿಂದ ಕೆಟ್ಟ ದಶರಥ, ಅಭಿಮಾನದಿಂದ ಕೆಟ್ಟ ಅಭಿಮನ್ಯು, ವಿಧಿಯಿಂದ ಕೆಟ್ಟ ಶೂದ್ರಕ, ನಿದ್ರೆಯಿಂದ ಕೆಟ್ಟ ಕುಂಭಕರ್ಣ, ಬಲಿಗೆ ಬಂಧನವಾಯಿತ್ತು. ಇದು ಕಾರಣ, ಕೂಡಲಚೆನ್ನಸಂಗಮದೇವಾ ನೀ ಮಾಡಿದ ಮಾಯೆಯ ಮಾಟವದಾರಾರನಾಳಿಗೊಳಿಸಿತ್ತು!