Index   ವಚನ - 18    Search  
 
ಎನ್ನ ಮನದ ಮರವೆ ಭಿನ್ನವಾಗದು. ಮರೆದು ಅರಿದೆಹೆನೆಂದಡೆ ಅರಿವಿನ ಮರವೆಯ ಮಧ್ಯದಲ್ಲಿ ಎಡೆದೆರಪಿಲ್ಲ. ಕೋಲಿನಲ್ಲಿ ನೀರ ಹೊಯ್ದಡೆ, ಸೀಳಿ ಹೋಳಾದುದುಂಟೆ ? ಅರಿವುದೊಂದು ಘಟ, ಮರೆವುದೊಂದು ಘಟ, ಒಡಗೂಡುವ ಠಾವಿನ್ನೆಂತೊ ? ಹುತ್ತದ ಬಾಯಿ ಹಲವಾದಡೆ, ಸರ್ಪನೆಯಿದುವಲ್ಲಿ ಒಡಲೊಂದೆ ತಪ್ಪದು. ತನ್ನ ಚಿತ್ತದ ಭೇದವಲ್ಲದೆ ವಸ್ತುವಿಗೆ ಭೇದವುಂಟೆ ? ವಿಷ ವಿಷವ ವೇಧಿಸುವಲ್ಲಿ ಬೇರೊಂದು ಅಸುವಿನ ಕಲೆವುಂಟೆ ? ಅಸಿಯ ಮಡುವಿನಲ್ಲಿ ಲತೆಯ ಹಾಸಿಕೆಯುಂಟೆ ? ಇಂತೀ ಹುಸಿಗಂಜಿ, ಗೂಡಿನಲ್ಲಿ ಅಡಗಿದೆ, ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗವೆ.