ಕಾಡುಗುರಿ ತೆನೆಯಾಗಿ ಬಂದು,
ಊರೊಳಗೆ ಮೂರು ಮರಿಯನೀಯಿತ್ತು.
ಅವರ ವರ್ಣ ಒಂದೆಡ, ಒಂದು ಕಾಡ,
ಒಂದು ಎಲ್ಲರ ಕೂಡಿದ ಬಣ್ಣ
ಹೆಂಗುರಿ ಸತ್ತಿತ್ತು, ಮರಿಗೆ ಒಡೆಯರಿಲ್ಲ.
ಆ ಮರಿಯ ಕಾವಡೆ,
ಕಾಲಿಲ್ಲದೆ ಕೈಯಿಲ್ಲದೆ ಕಣ್ಣಿಲ್ಲದೆ ಕಾಯಬೇಕು.
ಆ ಮರಿ ಅರಿದು ನಮಗೆ ಇನ್ನಾರು ಇಲ್ಲಾ ಎಂದು
ಎಡಕಾಡನೊಳಗಡಗಿ, ಕಾಡ ನಾನಾ ವರ್ಣದೊಳಗಡಗಿ,
ನಾಡು ನಾದದೊಳಗಡಗಿ, ನಾನಾ ವರ್ಣ ನಾಡಿನೊಳಗಡಗಿ,
ನಾದ ಸುನಾದದಲ್ಲಿ ಅಡಗಿ, ಸುನಾದ ಸುರಾಳವಾಗಿ ಇದ್ದಲ್ಲಿ,
ಗುಡಿಯ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ,
ನೀ ನಿರಾಳವಾಗಿ ಇದ್ದೆ.