Index   ವಚನ - 96    Search  
 
ಅರಿದು ಮರೆಯಲಿಲ್ಲ, ಕುಕ್ಕುರಜ್ಞಾನವಾಗಿ. ಇದಿರ ಕಂಡು ತಾ ಕಾಣದಂತೆ ಇರಲಿಲ್ಲ, ಗತಿಜಿಹ್ವೆಯ ಚತುಃಪಾದಿಯಂತೆ. ಕಾಲವನರಿತು, ಆ ಕಾಲದಲ್ಲಿ ಹೋಹ ಕಾಲಜ್ಞಾನಿಯಂತೆ, ಕೂಗಿ ಕರೆದು, ಕೂಲಿಸಿಕೊಂಬ ಶತಬುದ್ಧಿಪತಿ ಶಿವನಂತೆ, ಮಾಡಿದ ಅಸಿ ಕಾರುಕನೆಂದಡೆ, ಹೊಯಿದಡೆ, ಅಸುವಿನ ನಿಸಿತವ ಕೊಳದೆ? ತನ್ಮಯವಾದಡೆ, ಮರೆದಡೆ, ಎಳೆಯದೆ ಬಿಡದು, ನಿನ್ನ ಮಾಯೆ. ಆರಿ ನಂದದ ದೀಪದಂತೆ, ರವೆಗುಂದದ ಬೆಳಗಿನಂತೆ, ಹೊರಹೊಮ್ಮದ ದಿನಕರನಂತೆ, ಮಧುಋತು ಅರತ ಮಧುಕರನಂತೆ, ವಾಯು ಅಡಗಿದ ವಾರಿಧಿಯಂತೆ, ಅಸು ಅಡಗಿದ ಘಟಚಿಹ್ನದಂತೆ, ದಿಟಕರಿಸು, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಪರಿಪೂರಿತವಾಗಿರು.