Index   ವಚನ - 5    Search  
 
ಅನಲನ ತಾಹಲ್ಲಿ, ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ, ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕು; ಮಿಕ್ಕಾದ ತಿಲ, ತೈಲ, ಘೃತ, ಕ್ಷೀರ, ದಧಿ, ಮಧುರ, ಇಕ್ಷುದಂಡ, ಕ್ರಮುಕ, ಪರ್ಣ, ಚೂರ್ಣ, ರಸ, ದ್ರವ್ಯ ಮುಂತಾದವಿಂತು ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ಸಕಲ ಸುಯಿಧಾನಂಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು ಸತ್ಕ್ರೀ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ, ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ, ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು. ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ. ಆತ ಸರ್ವಶೀಲಸಂಪನ್ನ; ಸರ್ವಾಂಗ ಲಿಂಗ ಸನ್ನದ್ಧ; ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.