ಜಗಮೆಚ್ಚಬೇಕೆಂಬ ಶೀಲವ ನಾನರಿಯೆ,
ಕೊಳುಕೊಡೆಯಾಗಬೇಕೆಂಬ ಶೀಲವ ನಾನರಿಯೆ,
ದ್ರವ್ಯದ ಕಳ್ಳತನಕ್ಕಂಜಿ ಶೀಲವಾದುದ ನಾನರಿಯೆ.
ಹೊರಗಣ ಬಾವಿ, ಮನೆಯ ಮಡಕೆ -
ತನುಘಾತಕಕ್ಕಾದ ಶೀಲವೆಂದು ನಾನರಿಯೆ.
ತಾ ಹೋದಲ್ಲಿ ಇದಿರ ಕೇಳುವಲ್ಲಿ
ಆಯತ ಸ್ವಾಯತ ಸನ್ನಹಿತನೆಂಬುದ ವಿಚಾರಿಸಿ,
ಅಹುದಲ್ಲವೆಂಬುದ ಮನಕ್ಕೆ ಕುರುಹಿಟ್ಟು,
ನೇಮಕ್ಕೆ ಬಂದುದ ವ್ರತಕ್ಕೆ ಸಂದುದ
ಸಂದೇಹವುಳ್ಳನ್ನಕ್ಕ ವಿಚಾರಿಸಿ,
ಸಂದೇಹ ನಿಂದಲ್ಲಿ ತನ್ನ ಆಯತದ
ಅನುವನರಿತು ಕೊಂಬುದು ಪ್ರಸಾದವು.
ಇಂತೀ ತನುವಿಚಾರ ಕ್ರೀವಿಚಾರ;
ಇಂತೀ ಭಾವಶುದ್ಧಾತ್ಮವಾದಲ್ಲಿ ವ್ರತ ಸಂದಿತ್ತು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಶೀಲವಂತನಾದ.
Art
Manuscript
Music
Courtesy:
Transliteration
Jagameccabēkemba śīlava nānariye,
koḷukoḍeyāgabēkemba śīlava nānariye,
dravyada kaḷḷatanakkan̄ji śīlavāduda nānariye.
Horagaṇa bāvi, maneya maḍake -
tanughātakakkāda śīlavendu nānariye.
Tā hōdalli idira kēḷuvalli
āyata svāyata sannahitanembuda vicārisi,
ahudallavembuda manakke kuruhiṭṭu,
nēmakke banduda vratakke sanduda
sandēhavuḷḷannakka vicārisi,
sandēha nindalli tanna āyatada
anuvanaritu kombudu prasādavu.
Intī tanuvicāra krīvicāra;
intī bhāvaśud'dhātmavādalli vrata sandittu.
Ācārave prāṇavāda rāmēśvaraliṅga śīlavantanāda.