Index   ವಚನ - 343    Search  
 
ಮತ್ತಾ ಶಿವಪೂಜೆ ವಿಧಿಗೆ ದೇಶ ಕಾಲ ಸ್ಥಾನ ದ್ರವ್ಯ ಪ್ರಯೋಜನಾದಿಗಳಂ ತಾಂತ್ರಿಕ ವೈದಿಕವೆಂಬೆರಡು ಪೂಜಾಭೇದಂಗಳ್ ಅಂತಃಶೌಚ್ಯ ಬಾಹ್ಯಶೌಚ್ಯವೆಂಬೆರಡು ಶೌಚ್ಯಭೇದಂಗಳ್ ಶೋಷಣ ದಾಹನ ಪ್ಲಾದನವೆಂಬ ಕ್ರಿಯೆಗಳಿಂ ಆತ್ಮಶುದ್ಧಿ ಸ್ಥಾನಶುದ್ಧಿ ದ್ರವ್ಯಶುದ್ಧಿ ಲಿಂಗಶುದ್ಧಿ ಮಂತ್ರಶುದ್ಧಿ ಎಂಬ ಪಂಚ ಶುದ್ಧಿಗಳಿಂ ವಿಸ್ತರಿಸುವುದರಲ್ಲಿ- ಶೌಚಾಚಮನ ಸ್ನಾನ ಭಸ್ಮ ರುದ್ರಾಕ್ಷ ಧಾರಣ ಕವಚ ಮಂತ್ರ ಕಲಾನ್ಯಾಸ ಧ್ಯಾನದಿ ರಚನಂಗೈಯ್ವದೆ ‘ಆತ್ಮಶುದ್ಧಿ’ ಎನಿಸುವುದು. ಸಮ್ಮಾರ್ಜನಾನುಲೇಪನ ವರ್ಣಕ ಗಂಧ ಪುಷ್ಪ ಧೂಪ ದೀಪಾದಿ ನಿರ್ಮಲೋಪಕರಣಂಗಳಿಂ ಶೌಚಮನಲಂಕರಿಸುವುದೆ ‘ಸ್ನಾನಶುದ್ಧಿ’ ಎನಿಸುವುದಯ್ಯ. ಜಲಗಂಧಾಕ್ಷತ ಪುಷ್ಪಾದಿಗಳಂ ನಿರೀಕ್ಷಿಸಿ ಭಸ್ಮವಾರಿಗಳಿಂ ಸಂಪ್ರೋಕ್ಷಣಂಗೆಯ್ವುದೆ ‘ದ್ರವ್ಯಶುದ್ಧಿ’ ಎನಿಸುವುದಯ್ಯ. ಅನಾಮಿಕೆ ಮಧ್ಯಮೆಗಳ ಮಧ್ಯದಲ್ಲಿ ನವೀನ ಕುಸುಮವಿಡಿದು ಅಂಗಷ್ಠ ತರ್ಜನಿಗಳಿಂ ನಿರ್ಮಾಲ್ಯಮಂ ತ್ಯಜಿಸಿ ಲಿಂಗಪೀಠಮಂ ವಾರಿಯಿಂ ಪ್ರಕ್ಷಾಲನಂಗೆಯ್ವದೆ ‘ಲಿಂಗಶುದ್ಧಿ’ ಎನಿಸುವುದಯ್ಯ. ಸಕಲ ಪೂಜಾರ್ಥವಾಗಿ ‘ಓಂ ನಮಃ ಶಿವಾಯ ಸ್ವಾಹಾ’ ಎಂದು ಉಚ್ಚರಿಪುದೆ ‘ಮಂತ್ರಶುದ್ಧಿ’ಯಹುದಯ್ಯ ಶಾಂತವೀರೇಶ್ವರಾ