ಅದು ಕಾರಣ ಜಗತ್ತಿಗೂ ಈಶ್ವರಂಗೂ ಭೇದವಿಲ್ಲವಯ್ಯ
ಕಾರಣ ರೂಪವಾದ ಮಣ್ಣ ಮುದ್ದೆಯಿಂದ ಹುಟ್ಟಿದ
ಕುಂಭ ಮೊದಲಾದ ಹಾಂಗೆ ಮಣ್ಣಿಂದ ಭಿನ್ನವಿಲ್ಲ.
ಹಾಂಗೆಯೇ
ನಿಮಿತ್ತೋಪಾದನ ಕಾರಣನಾದ ಶಿವನಿಂದ ಹುಟ್ಟಿದ ಜಗತ್ತು
ಶಿವನಿಂದ ಭಿನ್ನವಲ್ಲವಯ್ಯ.
ವೃಕ್ಷವು ಪತ್ರ ಶಾಖೆ ಪುಷ್ಪ ಮೊದಲಾಗುಳ್ಳ
ರೂಪಿನಿಂದ ಹೇಗೆ ಇರುತ್ತದೊ ಹಾಂಗೆ
ಶಿವನೋರ್ವನೆ ಭೂಮಿ ಮೊದಲಾದ
ಜಗದ್ರೂಪಿನಿಂದ ಒಪ್ಪುವನಯ್ಯ
ಶಾಂತವೀರೇಶ್ವರಾ