Index   ವಚನ - 73    Search  
 
ಧನಶೀಲ ಮನಶೀಲ ತನುಶೀಲ ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ. ಇಂತೀ ವ್ರತಸಂಪದವೆಲ್ಲವು ಅದಾರ ಕುರಿತು ಮಾಡುವ ನೇಮ ಎಂಬುದ ತಾನರಿಯಬೇಕು. ಗುರುವಿಂಗೆ ತನುವನರ್ಪಿಸಿ, ಲಿಂಗಕ್ಕೆ ಮನವನರ್ಪಿಸಿ, ಜಂಗಮಕ್ಕೆ ಧನವನರ್ಪಿಸಿ, ತ್ರಿವಿಧಕ್ಕೆ ತ್ರಿವಿಧವ ಕೊಟ್ಟು, ತನ್ನ ವ್ರತಕ್ಕೆ ಭಿನ್ನಭಾವವಿಲ್ಲದೆ ನಿಂದುದೆ ವ್ರತ. ಹೀಗಲ್ಲದೆ, ಇದಿರ ಮಾತಿಂಗಂಜಿ ಕೊಡುವ ಕೊಂಬುವರ ನಿಹಿತಕ್ಕಂಜಿ ನಡೆವನ ವ್ರತ ಜಂಬುಕ ಶೀಲವಹಿಡಿದು ನಾಲಗೆಮುಟ್ಟದೆ ನುಂಗುವ ತೆರದಂತೆ ಸರ್ವವ ತಾ ಮುಟ್ಟುವಲ್ಲಿ ಜಂಗಮ ಮುಟ್ಟದೆ ತಾ ಮುಟ್ಟಿದನಾದಡೆ ಸಜ್ಜನ ಸ್ತ್ರೀ ಕೆಟ್ಟು ನಡೆದಂತೆ. ಬಾಯಿಯಿದ್ದು ಬಯ್ಯಲಾರೆ, ಕೈಯ್ಯಿದ್ದು ಪೊಯ್ಯಲಾರೆ, ಕಾಂಬುದಕ್ಕೆ ಮೊದಲೆ ಕಣ್ಣ ಮುಚ್ಚುವೆನು. ಈ ಗುಣ ತಪ್ಪದು ನಿಮ್ಮಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.