ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ.
ಪರಪಾಕ ಮುಂತಾದ ದ್ರವ್ಯವ ಬಿಟ್ಟಲ್ಲಿ ಶೀಲವಂತನಲ್ಲ.
ಅದೆಂತೆಂದಡೆ:
ಅದು ಮನದ ಅರೋಚಕ, ಆ ಗುಣ ಜಗದ ಮಚ್ಚು,
ಸರ್ವರ ಭೀತಿ, ದ್ರವ್ಯದ ಒದಗು; ಈ ಗುಣ ವ್ರತಕ್ಕೆ ಸಲ್ಲ.
ವ್ರತವಾವುದೆಂದಡೆ:
ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು,
ಗುರುಲಿಂಗಜಂಗಮದಲ್ಲಿ ತಾಗು ನಿರೋಧಮಂ ತಾಳದೆ,
ಹೆಣ್ಣು ಹೊನ್ನು ಮಣ್ಣಿಗಾಗಿ ತಪ್ಪಿ ನುಡಿಯದೆ,
ಒಡೆಯರು ಭಕ್ತರಲ್ಲಿ ತನ್ನ ಕುರಿತ ಗೆಲ್ಲ ಸೋಲಕ್ಕೆ ಹೋರದೆ,
ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ,
ಬಹು ಢಾಳಕತನವಂ ಬಿಟ್ಟು ಸರ್ವರ ಆತ್ಮ ಚೇತನವನರಿತು,
ತಾ ಮರೆದುದ ಅರಿದು ಎಚ್ಚತ್ತು ನೋಡಿ,
ಅಹುದಾದುದ ಹಿಡಿದು ಅಲ್ಲದುದ ಬಿಟ್ಟು,
ಬಹುದುಃಖಮಂ ಮರೆದು
ಇಂತೀ ಸರ್ವಗುಣಸಂಪನ್ನನಾಗಿ
ಆತ್ಮಂಗೆ ಅರಿವಿನ ಶೀಲವ ಮಾಡಿ,
ಕಾಯಕ್ಕೆ ಮರವೆ ಇಲ್ಲದ ಆಚಾರವನಂಗೀಕರಿಸಿ,
ಇಂತೀ ಕಾಯ, ಮನ, ಅರಿವಿನ
ಆಚಾರದಲ್ಲಿ ನಿಂದಲ್ಲಿ ನಿಂದು,
ಏತಕ್ಕೂ ಮರವೆಯಿಲ್ಲದೆ ಸರ್ವ ಅವಧಾನಂಗಳಲ್ಲಿ
ಹೊರಗಣ ಮಾಟ ಒಳಗಣ
ಕೂಟ ಉಭಯ ಶುದ್ಧವಾದಲ್ಲಿ
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದ ಜಿಡ್ಡು ಹರಿಯಿತ್ತು.