Index   ವಚನ - 700    Search  
 
ಅಪಸ್ಮಾರ ಗ್ರಹವೆ ಹಾವುಗೆ, ಮಣಿನಾಗವೆಂಬ ದಾರದಲ್ಲಿ ಪೋಣಿಸಿದ ಜಲಂಧರನ ತಲೆಯೇ ಜಂಗು, ಅಜಗರ ರೂಪ, ವಿಷ್ಣುವೆ ಕಟಿ ನೋಡಾ! ಫಣೆ ದನುಜನೆ ಕೌಪೀನು, ನಾರಸಿಂಹ ದಳೆಯೆ ಬಹಿರ್ವಾಸ, ಮೂಕಾಸುರನ ಚರ್ಮವೆ ಜೋಳಿಗೆ, ಸಿಂಹ ವಕ್ತ್ರನ ಸುಮ್ಮವೆ ಖಟ್ಟಾಂಗ, ಸೂರಪದ್ಮ ಸಮ್ಮುವ ಕಕ್ಷೆ, ಪಂಚಮೇಧ ದನುಜ ಚರ್ಮವೆ ಯೋಗವಟ್ಟಿಗೆಯು, ಜವನ ಚರ್ಮವೆ ಭಸ್ಮಧಾರಣವು, ವಾಮನ ನೆಟ್ಟಿಲುವೆ ದಂಡವು, ಬ್ರಹ್ಮನ ನಟ್ಟ ನಡುವಣ ತಲೆಯೋಡೆ ಖರ್ಪರವು, ವೃಷಭವೆ ಏರುವ ವಾಹನವು, ವರಹನ ಕೋರೆ ದಾಡೆಗಳೆ ಮುರಿಗಳು, ಕೂರ್ಮನ ಬೆನ್ನು ಚಿಪ್ಪೆಂಬ ಸೆಜ್ಜಂಗ, ಸರಸಿಜನ ಭವನ ಕೇಶವೆ ಶಿವದಾರವು, ಜಾಲಾಸುರನ ಚರ್ಮವೆ ವಸ್ತ್ರವು, ಪರಶಿವನ ಮೂರ್ತಿಯೆ ಲಿಂಗ, ಸಕಲ ಸುರ ಶಿರಗಳೆ ರುದ್ರಾಕ್ಷೆ, ಕಾಮವೆ ಭಸ್ಮ, ವಿಷ್ವಕ್ಸೇನನ ತಲೆಯೆ ದಂಡದ ಜಲ್ಲಿ, ಗರುಡನ ರೆಕ್ಕೆಯೆ ಜೆಲ್ಲಿಯ ಗವಸಣಿಗೆ, ಮಲ್ಲಾಸುರನ ಕರುಳೆಂಬ ಪಾಶವು, ಗುಹಾಸುರನ ಮುಖವೆ ಗಂಟೆ, ಗಂಗಾದೇವಿಯ ಬೇವಿನ ಹಳುಕು, ಜಡೆಯ ಕಟ್ಟುವ ದಾರವೆ ರಾಹು, ಚಂದ್ರನೆ ಪಟಿನ ಕಡ್ಡಿ, ಬ್ರಹ್ಮನ ಶಿರದ ಮೇಲಣ ಚಿಪ್ಪೆಂಬ ಶಂಖವು, ಕಂಬಲಾಶ್ವ ತರು ಕರ್ಣ ಕುಂಡಲವು, ತನ್ನ ಸತಿ ಗಿರಿಜೆ, ಗಣಪತಿ ವೀರೇಶ ಷಣ್ಮುಖರೆ ಶಿಷ್ಯರು, ಸೃಷ್ಟಿಯ ಕಾರ್ಯವೆ ಎಡೆಯಾಯ್ತ, ಚಿದ್ಭ್ರಹ್ಮಾಂಡವೆ ಬಿಡಾರವಯ್ಯ. ರಕ್ತ ಬೀಜಾಸುರನ ನೆತ್ತರೆ ಕಾವಿಯಾಯಿತ್ತಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಭಕ್ತಿ ನಿಮಿತ್ಯವಾಗಿ ಸಂಚರಿಸುವ ಚರಲಿಂಗದ ಪರಾಪರ ನಿರ್ಗಮನವೆಂತಿದ್ದಿತ್ತೆಂದೊಡೆ ಮುಂದೆ ‘ಪರಸ್ಥಲ’ವಾದುದು.