Index   ವಚನ - 100    Search  
 
ಭವಿ ನಿರೀಕ್ಷಣೆಯಾದ ದ್ರವ್ಯಂಗಳ ಮುಟ್ಟೆನೆಂಬಲ್ಲಿ ಮುಟ್ಟಿದ ಭೇದವಾವುದು ಹೇಳಿರಣ್ಣಾ. ಧಾನ್ಯ ವಿದಳಫಲ ಪಂಫಲಾದಿಗಳಲ್ಲಿ ಆಯತಕ್ಕೆ ಮುನ್ನವೊ ಆಯತದೊಳಗಾದಲ್ಲಿಯೊ! ಆ ನಿರೀಕ್ಷಣೆ ವ್ರತಕ್ಕೆ ದ್ರವ್ಯ ಮೊದಲಾದ ದ್ರವ್ಯಕ್ಕೆ ವ್ರತ ಮೊದಲೊ, ಅಲ್ಲ, ತಾ ಮಾಡಿಕೊಂಡ ನೇಮವೆ ಮೊದಲೊ ಇದ ನಾನರಿಯೆ; ನೀವು ಹೇಳಿರಯ್ಯಾ. ಭಾಷೆಗೆ ತಪ್ಪಿದ ಬಂಟ, ಲೇಸಿಗೆ ಒದಗದ ಸ್ತ್ರೀ, ವ್ರತದ ದೆಸೆಯನರಿಯದ ಆಚಾರ, ಕೂಸಿನವರವ್ವೆ ಹಣದಾಸೆಗೆ ಕರೆದು ತಾ ಘಾಸಿಯಾದಂತಾಯಿತ್ತು. ವ್ರತಾಚಾರದ ಹೊಲಬು ನಿಹಿತವಾದುದಿಲ್ಲ. ಏತದ ತುದಿಯಲ್ಲಿ ತೂತು ಮಡಕೆಯ ಕಟ್ಟಿದಲ್ಲಿ ಬಾವಿಯ ಘಾತಕ್ಕೆಸರಿ. ತೂತಿನ ನೀರಿನ ನಿಹಿತವನರಿಯದವನಂತೆ ವ್ರತಾಚಾರ ಸಲ್ಲದು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮಘಾತಕರುಗಳಿಗಿದಸಾಧ್ಯ.