Index   ವಚನ - 114    Search  
 
ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಕೃತ್ಯವಿಲ್ಲದ ನಿತ್ಯ ಎಷ್ಟಾದಡುಂಟು, ಕಟ್ಟಳೆಗೊಳಗಾದವು ಅರುವತ್ತಾರು ಶೀಲ, ಅರುವತ್ತುನಾಲ್ಕು ವ್ರತ, ಅಯಿವತ್ತುಮೂರು ನೇಮ, ಮೂವತ್ತೆರಡು ನಿತ್ಯ. ಇಂತಿವರ ಗೊತ್ತಿಗೊಳಗಾಗಿ ಕಟ್ಟಳೆಯಾಗಿ ನಡೆವಲ್ಲಿ ಅರ್ಥ ಪ್ರಾಣ ಅಭಿಮಾನಂಗಳಲ್ಲಿ, ತಥ್ಯಮಿಥ್ಯ ರಾಗದ್ವೇಷಂಗಳಲ್ಲಿ, ಭಕ್ತಿ ಜ್ಞಾನ ವೈರಾಗ್ಯಂಗಳಲ್ಲಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳಲ್ಲಿ, ಜರ ನಿರ್ಜರ ಸಮನ ಸುಮನಂಗಳಲ್ಲಿ, ಸರ್ವೇಂದ್ರಿಯ ಭಾವಭ್ರಮೆಗಳಲ್ಲಿ, ಐದು ತತ್ವದೊಳಗಾದ ಇಪ್ಪತ್ತಾರು ಕೂಟದಲ್ಲಿ, ಆತ್ಮವಾಯು ಒಳಗಾದವನ ವಾಯುವ ಬೆರಸುವಲ್ಲಿ, ಜಿಹ್ವೆದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ, ಇಂತೀ ಘಟದೊಳಗಾದ ಸಂಕಲ್ಪವೆಲ್ಲಕ್ಕೂ ಬಾಹ್ಯದಲ್ಲಿ ತೋರುವ ತೋರಿಕೆಗಳೆಲ್ಲಕ್ಕೂ ಹೊರಗೆ ಕ್ರೀ, ಆತ್ಮಂಗೆ ವ್ರತ. ಅವರವರ ತದ್ಭಾವಕ್ಕೆ ವ್ರತಾಚಾರವ ಮಾಡದೆ ಕಾಮಿಸಿ ಕಲ್ಪಿಸಿದೆನಾಯಿತ್ತಾದಡೆ, ಎನ್ನರಿವಿಂಗೆ ಅದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿಯೆ ಮಾಡುವೆನು.