Index   ವಚನ - 118    Search  
 
ಲಿಂಗಗೂಡಿ ಭರಿತಾರ್ಪಣವ ಅಂಗೀಕರಿಸುವಲ್ಲಿ, ಭರಿತ ಲಿಂಗಕ್ಕೊ ತನಗೊ ಎಂಬುದನರಿದು, ಲಿಂಗವೆಂತೆ, ತನ್ನಂಗವಂತೆ, ಬಂದಿತ್ತು ಬಾರದೆಂಬ ಆರೈಕೆಯನರಿತು, ಸಂದಿತ್ತು ಸಲ್ಲದೆಂಬ ಸಂದೇಹವ ತಿಳಿದು, ಸ್ವಯವಾಗಿ ನಿಂದುದು ನಿಜಭರಿತಾರ್ಪಣ. ಹೀಗಲ್ಲದೆ ಸಕಲವಿಷಯದಲ್ಲಿ ಹರಿದಾಡುತ್ತ ಆಮಿಷ ತಾಮಸ ರಾಗ ದ್ವೇಷದಲ್ಲಿ ಬೇವುತ್ತ ಇಂತಿವನರಿಯದ ತಮಗೆ ಸಂದುದಲ್ಲದೆ ಮರೆದೊಂದು ಬಂದಡೆ, ಆ ಲಿಂಗಪ್ರಸಾದವ ಇರಿಸಬಹುದೆ? ನೇಮ ತಪ್ಪಿ ಸೋಂಕಿದಲ್ಲಿ ಕೊಳ್ಳಬಹುದೆ? ಇಂತೀ ಅರ್ಪಿತದ ಸೋಂಕ, ಭರಿತಾರ್ಪಣದ ಪರಿಭಾವವ ನಿಮ್ಮ ನೀವೆ ನಿಶ್ಚೈಸಿಕೊಳ್ಳಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.