Index   ವಚನ - 12    Search  
 
ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗಕ್ಕೆ ನವವಿಧ ಪ್ರಕಾರವಾದ ಪೂಜೆ ಹೇಂಗೆಂದಡೆ: “ಪೂಜಾಮಿಷ್ಟ ತ್ರಿವಿಧ ಲಂಗೇ ತ್ರಯಂ ಪೂಜನ ಪ್ರಾಣಕಂ| ಭಾವಲಿಂಗೇ ತ್ರಿವಿಧಂ ಪೂಜಾನವೇತಿ ಪೂಜನಂ ಭವೇತ್||” ಎಂದುದಾಗಿ, ಇಷ್ಟಲಿಂಗವೆ ಕ್ಷಕಾರ ಸ್ವರೂಪು, ಪ್ರಾಣಲಿಂಗವೆ ಓಂಕಾರ ಸ್ವರೂಪು, ಭಾವಲಿಂಗವೆ ಶೃಂಗಯುಕ್ತವಾದ ಹ್ರಾಂ ಎಂಬ ಮಂತ್ರಸ್ವರೂಪ ನೋಡಾ. ಇಷ್ಟಲಿಂಗದ ಪೀಠವೆ ಇಷ್ಟಲಿಂಗ, ಗೋಮುಖವೆ ಪ್ರಾಣಲಿಂಗ, ಗೋಳಕವೆ ಭಾವಲಿಂಗ ನೋಡಾ. ತಾರೆ ದಂಡೆಗಳೆರಡು ಇಷ್ಟಲಿಂಗ, ಕುಂಡಲಾಕೃತಿ ಅರ್ಧಚಂದ್ರಾಕೃತಿಗಳೆರಡು ಪ್ರಾಣಲಿಂಗ, ದರ್ಪಣಾಕೃತಿ ಜ್ಯೋತಿರಾ ಭಾವಲಿಂಗ ನೋಡಾ. ಮತ್ತೆ ಹಕಾರ ಬಿಂದುಗಳೆರಡು ಇಷ್ಟಲಿಂಗ, ಮಂತ್ರ ಶೃಂಗಾಗ್ನಿ ಬೀಜಗಳೆರಡು ಪ್ರಾಣಲಿಂಗ, ದೀರ್ಘವೊಂದೆ ಭಾವಲಿಂಗ. ಈ ಪ್ರಕಾರದಲ್ಲಿ ಕರಸ್ಥಲ ಮನಸ್ಥಲ ಭಾವಸ್ಥಲದಲ್ಲಿ ಸಂಬಂಧಿಸಿ ತ್ರಿವಿಧವೊಂದೆಯೆಂದು ಮಾಡುವ ಕ್ರಮವೆಂತೆಂದರೆ: ವಿಭೂತಿ ರುದ್ರಾಕ್ಷ ಧಾರಣವೆ ಇಷ್ಟಲಿಂಗದ ಪೂಜೆ, ಶಿವಪೂಜಾ ವಿಧಾನವೆ ಇಷ್ಟಲಿಂಗದಲ್ಲಿ ಲೀಯವಾದ ಪ್ರಾಣಲಿಂಗದ ಪೂಜೆ, ಶ್ರದ್ಧಾಭಕ್ತಿಯೆ ಇಷ್ಟಲಿಂಗದಲ್ಲಿ ಸ್ಥಾಪ್ಯವಾದ ಭಾವಲಿಂಗದ ಪೂಜೆ. ಮತ್ತೆ ಬಾಹ್ಯದ ಪೂಜೆಯನು ಅಂತರಂಗದಲ್ಲಿ ಅಳವಡಿಸಿ ಮಾಡುವುದು ಪ್ರಾಣಲಿಂಗದ ಪೂಜೆ, ಮಾನಸ ಮಂತ್ರೋಚ್ಚರಣವೆ ಪ್ರಾಣಲಿಂಗದಲ್ಲಿ ನೆಲೆಸಿದ ಇಷ್ಟಲಿಂಗದ ಪೂಜೆ, ಧ್ಯಾನರೂಢವೆ ಪ್ರಾಣಲಿಂಗದಲ್ಲಿ ಸಂಬಂಧವಾದ ಭಾವಲಿಂಗದ ಪೂಜೆ, ಮತ್ತೆ ಸುಜ್ಞಾನವೆ ಭಾವಲಿಂಗದೊಳಗಣ ಇಷ್ಟಲಿಂಗದ ಪೂಜೆ, ಮನೋರ್ಲಯವೆ ಬಾವಲಿಂಗದಲ್ಲಿ ಪೂಜೆ, ಪರಿಣಾಮವೆ ಬಾವಲಿಂಗದಲ್ಲಿ ನೆಲೆಸಿದ ಪ್ರಾಣಲಿಂಗದ ಪೂಜೆಯಯ್ಯ. ಇಂತಪ್ಪ ಶಿವಪೂಜೆಯ ಮಾಡುವ ಶರಣರ ತೋರಾ ಶೂನ್ಯನಾಥಯ್ಯ.