Index   ವಚನ - 124    Search  
 
ವ್ರತ ನೇಮ ಶೀಲಮಂ ಮಾಡಿಕೊಂಡು, ಸಮಯಾಚಾರದಲ್ಲಿ ನಡೆದೆನೆಂಬ ಭಕ್ತನ ಕ್ರಮವೆಂತೆಂದಡೆ: ತಾನು ಭೋಗಿಸುವಂತಹ ಸಕಲದ್ರವ್ಯಂಗಳೆಲ್ಲವನು, ಜಂಗಮಕ್ಕೆ ಕೊಟ್ಟು ತಾನು ಕೊಳಬೇಕು. ಅವಾವೆಂದಡೆ: ಮಜ್ಜನ, ಭೋಜನ, ಅಂದಣ, ಸತ್ತಿಗೆ, ಚಾಮರ, ಆನೆ, ಕುದುರೆ, ಕನ್ನಡಿ, ಪರಿಮಳ, ಲೇಪನ, ಗಂಧ, ಅಕ್ಷತೆ, ವಸ್ತ್ರ, ರತ್ನಾಭರಣ, ತಾಂಬೂಲ, ಮೆಟ್ಟಡಿ ಮಂಚ, ಸುಪ್ಪತ್ತಿಗೆ, ಒಡೆಯರಿಗೆ ಆಯಿತೆಂಬುದ ಕೇಳಿ, ಆ ಒಡೆಯನ ವಾಕ್ಯಪ್ರಸಾದದಿಂದ, ಮಹಾಪ್ರಸಾದವೆಂದು ಎಲ್ಲ ವ್ರತಂಗಳಿಗೆಯೂ ಜಂಗಮ ಪ್ರಸಾದವೆ ಪ್ರಾಣ; ಎಲ್ಲ ನೇಮಕ್ಕೆಯೂ ಜಂಗಮದರ್ಶನವ ನೇಮ; ಎಲ್ಲ ಶೀಲಕ್ಕೆಯೂ ಜಂಗಮದ ಮಾಟವೆ ಶೀಲ; ಎಲ್ಲ ವ್ರತ ನೇಮ ಶೀಲಂಗಳೆಲ್ಲವು ಜಂಗಮವ ಮುಂದಿಟ್ಟು ಶುದ್ಧತೆಯಹ ಕಾರಣ, ಆ ಜಂಗಮದಲ್ಲಿ ಅರ್ಥ, ಪ್ರಾಣ, ಅಭಿಮಾನ ಮುಂತಾದ ಈ ಮೂರಕ್ಕು ಕಟ್ಟು ಮಾಡಿದೆನಾದಡೆ ಎನಗೆ ದ್ರೋಹ. ಆ ಜಂಗಮದ ದರ್ಶನದಿಂದವೆ ಸಕಲದ್ರವ್ಯಂಗಳು ಪವಿತ್ರವು; ಆ ಜಂಗಮ ಪ್ರಸಾದದಿಂದವೆ ಮಹಾಘನಲಿಂಗಕ್ಕೆ ತೃಪ್ತಿ. ಆ ಜಂಗಮದ ಪಾದತೀರ್ಥದಿಂದವೆ ಮಹಾಘನಲಿಂಗಕ್ಕೆ ಜೀವಕಳೆ. ಇಷ್ಟನರಿದ ಬಳಿಕ ಜಂಗಮಲಿಂಗಕ್ಕೆ ಸಂದೇಹವ ಮಾಡಿದೆನಾದಡೆ ಎನಗೆ ಕುಂಭೀಪಾತಕ ನಾಯಕನರಕ ತಪ್ಪದು. ಈ ಜಂಗಮದ ಭಕ್ತಿ ಕಿಂಚಿತ್ತು ಕೊರತೆ ಇಲ್ಲದ ಹಾಗೆ ಜೀವವುಳ್ಳ ಪರಿಯಂತರ ಇದೆ ಆಚಾರವಾಗಿ, ಇದೇ ಪ್ರಾಣವಾಗಿ ನಡೆದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನೊಡಗೂಡುವೆನು.