ಬಸವಣ್ಣ   
Index   ವಚನ - 865    Search  
 
ಭಕ್ತನ ಮಠವೆಂದು ಜಂಗಮ ನಡೆದು ಬಂದಲ್ಲಿ, ಆ ಭಕ್ತನ ಕಾಣುತ್ತ, ಆಸನತ್ಯಜತೆಯ ಮಾಡುತ್ತ, ಕೊಂಕುತ್ತ, ಕೈಮುಗಿದು ನಿಂದಿರ್ದು, ಬಾಗಿ ಬಳಕುತ್ತ, ` `ಬಿಜಯಂ ಮಾಡಿ, ದೇವಾ!' ಎಂದು ಕರೆದು ಕುಳ್ಳಿರಿಸಿ, ಪಾದಾರ್ಚನೆಯಂ ಮಾಡಿ, ಪಾದೋದಕವಂ ಕೊಂಡು, ವಿಭೂತಿ-ವೀಳೆಯಂ ಕೊಟ್ಟು, ಕಂಗಳು ತುಂಬಿ ನಿರೀಕ್ಷಿಸಿ, ಶ್ರೋತ್ರ ತುಂಬಿ ಹಾರೈಸಿ, ಬಾಯಿ ತುಂಬಿ ಮಾತನಾಡಿ, `ಏಗುವುದು ಏ ಬೆಸನೆಂ'ದು; ತನುಕರಗಿ ಮನಕರಗಿ ನೋಡಿ, ಮಾಡುವುದು ಭಕ್ತಿಸ್ಥಲ. ಬಡವನಾಗಲಿ, ಬಲ್ಲಿದನಾಗಲಿ, ಇನಿತು ಮುಖ್ಯವಾಗಿ ಮಾಡಿಸಿಕೊಂಬುದು ಜಂಗಮಸ್ಥಲ. ಈ ಎರಡೊಂದಾದ ಘನವನಂತಿಂದೆಂದುಪಮಿಸಲಾಗದಂತಿರಲಿ ! ಇನಿತಲ್ಲದೆ ಮಾಡಿದ ಮಾಟ ಭಕ್ತಿಸ್ಥಲಕ್ಕೆ ಸಲ್ಲದು; ಫಲದಾಯಕನೈಸೆ ! ಇನಿತಲ್ಲದೆ ಮಾಡಿಕೊಂಬುದು ಜಂಗಮಸ್ಥಲಕ್ಕೆ ಸಲ್ಲದು, ಉಪಜೀವಿತನೈಸೆ ? ಈ ಎರಡಕ್ಕೆಯೂ ಭವ ಹಿಂಗದು, ಕಾಣಾ, ಕೂಡಲಸಂಗಮದೇವಾ!