Index   ವಚನ - 60    Search  
 
ತೊಗಲ ಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ ಪರುಷವ ಕಟ್ಟುವರೆ? ಮಣ್ಣ ಹರವಿನಲ್ಲಿ ಸುರೆಯ ತುಂಬುವರಲ್ಲದೆ ರತ್ನವ ತುಂಬುವರೆ? ಆದ್ಯರ ವಚನಂಗಳಿರ್ದುದ ಕಾಣಲರಿಯದೆ ನಾ ಘನ ತಾ ಘನವೆಂದು ಅಗಮ್ಯವ ಬೀರುವ ಅಜ್ಞಾನಿಗಳ ವಿರಕ್ತರೆಂಬೆನೆ? ಅನುಭಾವಿಗಳೆಂಬೆನೆ? ನಿಜವನರಿದ ಲಿಂಗೈಕ್ಯರೆಂಬೆನೆ? ಅಮುಗೇಶ್ವರಲಿಂಗವನರಿಯದ ಜ್ಞಾನಿಗಳ ಆರೂಢರೆಂಬೆನೆ?