ಬಸವಣ್ಣ   
Index   ವಚನ - 961    Search  
 
ಅಂಗದ ಮೇಲೆ ಲಿಂಗ ಆಯತವಾಗಿ ಲಿಂಗಾರ್ಚನೆಯ ಮಾಡಿದಡೆ ಭವ ಹಿಂಗದೆಂದು, ಪ್ರಾಣದ ಮೇಲೆ ಲಿಂಗ(ಸ್ವಾ)ಯತವ ಮಾಡಿ ಎನ್ನಂತರಂಗ ಶುದ್ಧವ ಮಾಡಿ ಲಿಂಗೈಕ್ಯದ ಹೊಲಬ ತೋರಿದನಯ್ಯಾ, ಚೆನ್ನಬಸವಣ್ಣನು. ಕಾಯದ ಕಳವಳವು ದಾಸೋಹದ ಅಮುಖದಲ್ಲಿ ಅಲ್ಲದೆ ಹರಿಯದೆಂದು ಜಂಗಮಮುಖಲಿಂಗವಾಗಿ ಬಂದು ಎನ್ನ ಶಿಕ್ಷಿಸಿ ರಕ್ಷಿಸಿ ಎನ್ನ ಸಂಸಾರದ ಪ್ರಕೃತಿಯ ಹರಿದನಯ್ಯಾ, ಪ್ರಭುದೇವರು. ಕೂಡಲಸಂಗಮದೇವರಲ್ಲಿ ಪ್ರಭುದೇವರ ಚೆನ್ನಬಸವಣ್ಣನ ಕರುಣದಿಂದಲಾನು ಬದುಕಿದೆನು.