ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತನಾಗಿ
ನನ್ನವರು ತನ್ನವರೆಂದು ನುಡಿವ ಕುನ್ನಿಗಳ
ವಿರಕ್ತರೆಂಬೆನೆ ಅಯ್ಯಾ?
ಪಕ್ಷ ಪರಪಕ್ಷಂಗಳನರಿತು
ಹೇಹಂಗಳ ಜರಿಯಬಲ್ಲಡೆ ವಿರಕ್ತನೆಂಬೆನು.
ತ್ರಿವಿಧವನತಿಗಳೆದು ವಿರಕ್ತನಾದ ಬಳಿಕ
ತ್ರಿವಿಧವ ಹಿಡಿದ ಗುರುವ ಕಂಡಡೆ,
ಅವನ ಅಡಿಗೆರಗಿದೆನಾದಡೆ
ಅಘೋರ ನರಕ ತಪ್ಪದು, ಅದೇನು ಕಾರಣವೆಂದಡೆ
ಭವಪಾಶಂಗಳ ಹರಿದು ಅವಿರಳನಾದ ಕಾರಣ,
ವ್ರತಭ್ರಷ್ಟ ಲಿಂಗಬಾಹ್ಯನ ಮುಖವ ನೋಡೆನು.
ಹೊನ್ನು ಹೆಣ್ಣು ಮಣ್ಣು ಹಿಡಿವರ ಕಂಡಡೆ,
ಎನ್ನ ಗುರುವೆಂದು ಅಡಿಗೆರಗೆನು,
ಬಸವಣ್ಣನೆ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ.