ಬಸವಣ್ಣ   
Index   ವಚನ - 1196    Search  
 
ಜಗತ್ರಯದ ಹೊ(ಲೆ)ಯನೆಲ್ಲವನು ಉದಕ ಒಳಕೊಂಬುವುದು. ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ; 'ಯದಾ ಪೃಥ್ವೀ ಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್' ಎಂದುದಾಗಿ. ಅದಕ್ಕೆ ಮತ್ತೆಯು; 'ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೇಯತೇ' ಎಂದುದಾಗಿ, ಯಥಾ ಉದಕದಿಂದಲಿ ಅಗ್ನಿಯಿಂದಲಿ ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು ಜೀವಮಯವೆಂದು ಹೇಳುತಿರ್ದವಾಗಿ, ಆ ದೋಷದಿಂದಲಾದ ಭೋಜನವನು ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ; 'ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಷ್ಯತೆʼ ಎಂದುದಾಗಿ ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು, ಹೇಗೆ ಹೋಹುದಯ್ಯಾ ಎಂದಡೆ: ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥಮುಖದಿಂದ ಹೋಯಿತ್ತು, ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು. ಇದು ಕಾರಣ, ಈ ವರ್ಮ ಸಕೀಲವು ಪ್ರಭುದೇವರ ಬಳಿಯ ಬಸವಣ್ಣನ ವಂಶಕ್ಕಲ್ಲದೆ ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.