ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು.
ಆ ಅರಸಿಂಗೆ ನೋಟ ಬೇಟದವರಿಬ್ಬರು.
ಅಷ್ಟಮಣಿಹ ಹರಿಮಣಿಹದವರು.
ಅವರ ಸುತ್ತ ಓಲೈಸುವರು ಇಪ್ಪತ್ತೈದು ಮಂದಿ.
ಅವರಿಗೆ ಕತ್ತಲೆಯ ಬಲೆಯ ಬೀಸಿ ಕೆಡಹಿ,
ಅರಸಿನ ಗೊತ್ತುವಿಡಿದು ಉತ್ತರವನೇರಿ
ನಿಶ್ಚಿತವಾಗಿ ನಿಜದಲ್ಲಿ ನಿರ್ವಯಲನೆಯ್ದುವ
ಶರಣರ ಪಾದವ ಹಿಡಿದು,
ಎತ್ತ ಹೋದೆನೆಂದರಿಯೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.