Index   ವಚನ - 1    Search  
 
ಅಂಗಕ್ರಿಯೆಯನರಿವಲ್ಲಿ ಸ್ಥಾಣುವಿನ ಬಾಯ ತಿಲದಂತೆ, ಆತ್ಮನ ಕಳೆಯ ತಿಳಿವಲ್ಲಿ ಶಿಲೆಯಲ್ಲಿರ್ದ ಬಿಂದು ಒಲವರದಿಂದ ಜಾರುವಂತೆ, ಆ ಅರಿವು ಮಹದಲ್ಲಿ ಬೆರಸುವಾಗ, ವಾರಿಶಿಲೆ ನೋಡ ನೋಡಲಿಕೆ ನೀರಾದಂತೆ ಇರಬೇಕು. ಕಾಯವಶದಿಂದ ಕರ್ಮವ ಮೀರಿ, ಕರ್ಮವಶದಿಂದ ವರ್ಮವಶಗತನಾದಲ್ಲಿ, ಅದೆ ಕಾಯವೆರಸಿ ಎಯ್ದಿದ ಕೈಲಾಸ. ಆ ಭಾವವ ನಿಮ್ಮಲ್ಲಿ ನೀವೇ ತಿಳಿದುಕೊಳ್ಳಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.