Index   ವಚನ - 1    Search  
 
ಅಯ್ಯಾ, ದುರುಳಕಾಮಿನಿಯರಿಗೆ ಎರಗುವ ಹೊಲೆಮನಸೆ, ಗುರುವಿಂಗೆ ಎರಗಿ ಎರಕಡರ್ದಡಾತನ ಗುರುಕರಜಾತನೆಂಬೆ. ಉದರದ ನೆಲೆಯನರಿದಾತನ ಉದಾಸಿಯೆಂಬೆ. ಜನನದ ನೆಲೆಯನರಿದಾತನ ಜಂಗಮವೆಂಬೆ. ಮರಣದ ನೆಲೆಯನರಿದಾತನ ಮಹಾಂತಿನೊಳಗಣ ಹಿರಿಯನೆಂಬೆ. ಸಕಲದ ಹಸಿಗೆಯ ನೆಲೆಯನರಿದಾತನ ಹಂಚು ಕಂತೆಯೆಂಬೆ. ಅತ್ಯತಿಷ್ಠದ್ದಶದಿಂದತ್ತತ್ತ ಬೆಳಗುವ ಮಹಾಬೆಳಗನರಿದಾತನ ಅತೀತನೆಂಬೆ. ಅರುಹು ಅರತು, ಮರಹು ನಷ್ಟವಾಗಿ ಅರುಹು ಕರಿಗೊಂಡಾತನ ಮಂಕು ಮರುಳು ಎಂಬೆ. ತನುಧರ್ಮ ತರಹರಿಸಿ, ಮನದ ಸಂಚಲವಳಿದು ಒಳಗೆ ನುಣ್ಣಗಾಗಬಲ್ಲಡೆ ಬೋಳಕಾಕಾರ, ಬೋಳನಿರ್ವಾಣಿಗಳೆಂಬೆ. ಹೀಂಗಲ್ಲದೆ ತಾಯಿಸತ್ತ ತಬ್ಬಲಿಯಂತೆ, ಹಲಬರಿಗೆ ಹಲ್ಲದೆರೆದು, ಹಲಬರಿಗೆ ಬೋದಿಸಿ ತನ್ನ ಉದರವ ಹೊರೆವ ಸಂದೇಹಿಗಳ ಕಂಡು ಎನ್ನ ಮನ ಸಂದೇಹಿಸಿತ್ತು ಕಾಣಾ ಮಹಾಗುರು ಶಾಂತೇಶ್ವರಪ್ರಭುವೆ.